ಬೆಂಗಳೂರು : ಸಾಲಕ್ಕೆ ಹೆಚ್ಚು ಬಡ್ಡಿ ನೀಡುವಂತೆ ಮಾಜಿ ರೌಡಿ ಜೊತೆಗಿನ ಫೋಟೋ ತೋರಿಸಿ, ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ದೀಪಕ್ ಮತ್ತು ಜಯಕುಮಾರ್ ಎಂಬವರನ್ನು ಪೊಲೀಸರು ಸಿಸಿಬಿ ಅರೆಸ್ಟ್ ಮಾಡಿದ್ದಾರೆ.
ದೀಪಕ್ ಮತ್ತು ಜಯಕುಮಾರ್ ಬಳಿ ರವಿ ಎನ್ನುವ ವ್ಯಕ್ತಿ ಲಕ್ಷಾಂತರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದ. ಇದಕ್ಕೆ ಪ್ರತಿಯಾಗಿ ಬಂಧಿತ ಆರೋಪಿಗಳು ಅಧಿಕ ಬಡ್ಡಿ ಪಡೆಯುತ್ತಿದ್ದರು. ದೀಪಕ್ ಬಳಿ ರವಿ 13 ಲಕ್ಷ ಸಾಲಕ್ಕೆ 63 ಲಕ್ಷ ರೂಪಾಯಿ ಬಡ್ಡಿ ನೀಡಿದ್ದ. ಇನ್ನು ಜಯ ಕುಮಾರ್ ಬಳಿ ಪಡೆದ 8 ಲಕ್ಷಕ್ಕೆ ರವಿ ತಿಂಗಳಿಗೆ 80,000 ಬಡ್ಡಿಯನ್ನು ಕಟ್ಟುತ್ತಿದ್ದ. ಆದರೂ ಸಹ ಅಸಲು ತೀರಿಲ್ಲ ಎಂದು ಹೆಚ್ಚು ಬಡ್ಡಿಗೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾರೆ.
ಬಡ್ಡಿ ಹಣ ನೀಡಲು ತಡವಾದ ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. 4 ಕೋಟಿ ಸಾಲ ಪಡೆದಿದ್ದಾಗಿ ದಾಖಲೆ ಸೃಷ್ಟಿಸಿ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ. ಸೈಲೆಂಟ್ ಸುನಿಲ ಮತ್ತು ರೌಡಿಗಳ ಜೊತೆಗಿರೋ ಫೋಟೋ ತೋರಿಸಿ ಹೆಚ್ಚು ಬಡ್ಡಿ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಫೋಟೋಗಳನ್ನು ವಾಟ್ಸಾಪ್ ಮಾಡಿ ಕೊಲೆ ಮಾಡುವುದಾಗಿ ಕೂಡ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತಮ್ಮ ಹುಡುಗರನ್ನು ರವಿ ಮನೆಯ ಬಳಿಯೂ ಕಳುಹಿಸಿ ಬೆದರಿಸಿದ್ದಾರೆ ಎಂದು ರವಿ ಆರೋಪಿಸಿದ್ದಾರೆ.
ಸದ್ಯ ರವಿ ದೂರು ಆಧರಿಸಿ ದೀಪಕ್ ಮತ್ತು ಜಯಕುಮಾರ್ ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಸೈಲೆಂಟ್ ಸುನೀಲನಿಗೂ ಮತ್ತು ಬಂಧಿತ ಆರೋಪಿಗಳಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ತಿಳಿದು ಬಂದಿದೆ. ಯಾವುದೋ ಕಾರ್ಯಕ್ರಮದಲ್ಲಿ ಆರೋಪಿಗಳು ಸೈಲೆಂಟ್ ಸುನಿಲ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿರುವುದು ತನಿಖೆಯಲ್ಲಿ ಬಯಲಾಗಿದೆ.