ಬೆಂಗಳೂರು : ರಾಜ್ಯದ ಪ್ರಮುಖ ಹೆದ್ದಾರಿಯಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೊಡ್ಡ ಶಾಕ್ ನೀಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಟೋಲ್ ದರವನ್ನು ಪರಿಷ್ಕರಿಸಲಾಗಿದ್ದು, ಏಪ್ರಿಲ್ 1, 2026 ರಿಂದ ಹೊಸ ದರಗಳು ಜಾರಿಗೆ ಬಂದಿವೆ.
ರಾಷ್ಟ್ರೀಯ ಹೆದ್ದಾರಿಗಳ ಸುಂಕ ನಿಯಮಗಳ ಪ್ರಕಾರ, ಪ್ರತಿ ವರ್ಷ ಹಣದುಬ್ಬರ ಮತ್ತು ಇತರ ಮಾನದಂಡಗಳ ಆಧಾರದ ಮೇಲೆ ಟೋಲ್ ದರಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿನ ಸಂಚಾರ ಸುಂಕವನ್ನು ಸುಮಾರು ಶೇ. 3 ರಿಂದ ಶೇ. 5 ರಷ್ಟು ಹೆಚ್ಚಳ ಮಾಡಲಾಗಿದೆ.
ಮೊದಲು ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದರೇ 345 ರೂಪಾಯಿ ಟೋಲ್ ಕಟ್ಟಾಗುತ್ತಿತ್ತು, ಇಂದಿನಿಂದ 355 ರೂಪಾಯಿ ಟೋಲ್ ಕಟ್ಟಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಹೊರೆ ಬಿದ್ದಂತೆ ಆಗಿದೆ. ಮೊದಲೇ ಟೋಲ್ ದರ ಹೆಚ್ಚಿತ್ತು, ಈಗ ಮತ್ತಷ್ಟು ಏರಿಕೆ ಮಾಡಿದರೆ ನಾವು ಹೇಗೆ ಕಾರು ಓಡಿಸೋದು ಎಂದು ಒಂದಷ್ಟು ಚಾಲಕರು ಪ್ರಶ್ನೆ ಮಾಡ್ತಿದ್ದಾರೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಹಾಗೂ ರಾಮನಗರದ ಗಣಮಿಣಕಿ ಬಳಿ ಸೇರಿ ಎರಡು ಟೋಲ್ ಪ್ಲಾಜಾಗಳಿದ್ದು ಈ 2 ಟೋಲ್‌ಗಳಲ್ಲೂ ದರವನ್ನು ಒಂದೇ ಮಾದರಿಯಲ್ಲಿ ಏರಿಕೆ ಮಾಡಲಾಗಿದೆ. ಪ್ರತಿ ಟೋಲ್‌ನಲ್ಲಿ 5 ರೂ. ನಿಂದ 25 ರೂ. ವರೆಗೆ ಏರಿಕೆಯಾಗಿದೆ. 118 ಕಿಮೀ ಇರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾರಿನಲ್ಲಿ ಪ್ರಯಾಣ ಮಾಡಿದರೆ ಪ್ರತಿ ಟೋಲ್‌ನಲ್ಲಿ 5 ರೂ. ಎಂಬಂತೆ ಎರಡು ಟೋಲ್‌ಗಳಿಂದ 10 ರೂಪಾಯಿ ಏರಿಕೆಯಾಗಿದೆ.
| ವಾಹನಗಳ ವರ್ಗ | ಹಳೆಯ ದರ (ಒಂದು ಕಡೆಗೆ) | ಹೊಸ ದರ (ಒಂದು ಕಡೆಗೆ) | ಏರಿಕೆ ಮೊತ್ತ |
| ಕಾರು, ಜೀಪ್, ವ್ಯಾನ್ | ₹ 170 | ₹ 175 | ₹ 5 |
| ಲಘು ವಾಣಿಜ್ಯ ವಾಹನ / ಮಿನಿ ಬಸ್ | ₹ 275 | ₹ 280 | ₹ 5 |
| ಟ್ರಕ್, ಬಸ್ (2 ಆಕ್ಸಲ್) | ₹ 570 | ₹ 585 | ₹ 15 |
| 3 ಆಕ್ಸಲ್ ವಾಣಿಜ್ಯ ವಾಹನ | ₹ 625 | ₹ 640 | ₹ 15 |
| ಭಾರೀ ನಿರ್ಮಾಣ ಯಂತ್ರೋಪಕರಣ (4-6 ಆಕ್ಸಲ್) | ₹ 900 | ₹ 920 | ₹ 20 |
| ಬೃಹತ್ ವಾಹನಗಳು (7+ ಆಕ್ಸಲ್) | ₹ 1,095 | ₹ 1,120 | ₹ 25 |








