ಬೆಂಗಳೂರು : ಖಗೋಳದ ಅಪರೂಪದ ಮತ್ತು ಅಪೂರ್ವವಾದ ವಿದ್ಯಮಾನ ಖಗ್ರಾಸ ಚಂದ್ರ ಗ್ರಹಣ ಸೆ.7ರ ರಾತ್ರಿ ಜರುಗಲಿದ್ದು, ಚಂದಿರನು ರಕ್ತ ವರ್ಣ/ತಾಮ್ರ ವರ್ಣದಲ್ಲಿ ಕಾಣಿಸಲಿದ್ದಾನೆ.
ಈ ಅಪರೂಪದ ಖಗೋಳ ವಿಸ್ಮಯ ಭಾರತದಲ್ಲಿ 5 ತಾಸು 27 ನಿಮಿಷಗಳ ಕಾಲ ಇರಲಿದೆ. ಅದರಲ್ಲಿ 1 ತಾಸು 22 ನಿಮಿಷಗಳ ಕಾಲ ಸಂಪೂರ್ಣ ಗ್ರಹಣ ಇರಲಿದೆ. ನಾಗರಿಕರು ತಮ್ಮ ಮನೆಗಳ ಮೇಲೆ ನಿಂತು ಬರಿಗಣ್ಣಿನಲ್ಲೇ ಕೆಂಪು ಶಶಿಯನ್ನು ವೀಕ್ಷಿಸಬಹುದಾಗಿದೆ ಎಂದು ಜವಾಹರಲಾಲ್ ನೆಹರುತಾರಾಲಯದ ನಿರ್ದೇಶಕ, ವಿಜ್ಞಾನಿ ಡಾ.ಬಿ.ಆರ್. ಗುರುಪ್ರಸಾದ್ ತಿಳಿಸಿದರು.
ಸೆ.7ರಂದು ರಾತ್ರಿ 8.58ಕ್ಕೆ ಚಂದ್ರ ಗ್ರಹಣ ಆರಂಭವಾಗಿ, 9.57ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗು ತ್ತದೆ. ಆದರೆ, ರಾತ್ರಿ 11ರಿಂದ ಸಂಪೂರ್ಣ ಗ್ರಹಣ ಆರಂಭವಾಗುತ್ತದೆ. ಈ ಅವಧಿಯಲ್ಲೇ ಕೆಂಪು ಚಂದಿರನನ್ನು ಕಾಣಬಹುದಾಗಿದೆ. ಗ್ರಹಣ ತಡರಾತ್ರಿ 1.26 ಮುಕ್ತಾಯಗೊಳ್ಳಲಿದೆ. ಭಾರತದ ಎಲ್ಲೆಡೆ ಈ ಗ್ರಹಣ ಕಾಣಿಸುತ್ತದೆ. ಜಗತ್ತಿನ ಜನಸಂಖ್ಯೆಯ ಶೇ.88ರಷ್ಟು ಜನ ಈ ಗ್ರಹಣವನ್ನು ವೀಕ್ಷಿಸಬಹುದುಎಂದು ಗುರುಪ್ರಸಾದ್ ಮಾಹಿತಿ ನೀಡಿದರು.
ಸೂರ್ಯ, ಭೂಮಿ ಮತ್ತು ಚಂದ್ರ ಸರಳ ರೇಖೆಯಲ್ಲಿ ಬಂದಾಗ, ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಭೂಮಿ ತಡೆಯುತ್ತದೆ. ಆಗ ಚಂದ್ರ ಆಕಾಶಕಾಯವಾಗಿ ರಕ್ತವರ್ಣದ ಗೋಚರಿಸುತ್ತದೆ. ಈಗ ಮಳೆಗಾಲ ವಿದ್ದು, ಮೋಡ ಬಂದರೆ ಗ್ರಹಣ ವೀಕ್ಷಣೆ ಕಷ್ಟವಾಗುತ್ತದೆ. ಟೆಲಿಸ್ಕೋಪ್ ಬಳಸಿದರೆ ಚಂದಿರನ ಮೇಲ್ಮಯನ್ನು ವಿವರವಾಗಿ ನೋಡಬಹುದುಎಂದುಗುರುಪ್ರಸಾದ್ ಹೇಳಿದರು.
ಹಲವು ದೇಗುಲ ಬಂದ್, ಕೆಲವೆಡೆ ವಿಶೇಷ ಪೂಜೆ
ಚಂದ್ರಗ್ರಹಣ ಹಿನ್ನೆಲೆ ರಾಜ್ಯದ ಹಲವು ದೇವಸ್ಥಾನಗಳನ್ನು ಸಂಜೆಯೇ ಬಂದ್ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರದ ಭೋಗನಂದೀಶ್ವರ ದೇವಾಲಯವನ್ನು ಸಂಜೆ 4.30ಕ್ಕೆ ಬಂದ್ ಮಾಡಲಾಗುತ್ತದೆ. ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೇ ಶ್ವರಿ ದೇಗುಲಗಳಲ್ಲಿ ರಾತ್ರಿ ಪ್ರಸಾದ ವಿತರಣೆ ಇರುವುದಿಲ್ಲ.
ಇಡಗುಂಜಿ, ಗೋಕರ್ಣ, ಮುರ್ಡೇಶ್ವರ ದೇವಾಲಯಗಳಲ್ಲಿ ಅಭಿಷೇಕ ನಡೆಸಿದ ಬಳಿಕ ಬಾಗಿಲು ಹಾಕಲಾಗುವುದು. ಕೊಪ್ಪಳದ ಅಂಜನಾದ್ರಿ ಹಾಗೂ ಹುಲಿಗೆಮ್ಮ ದೇವಿಯ ದರ್ಶನವನ್ನು ಸಂಜೆ 5ರಿಂದ ರದ್ದುಪಡಿಸಲಾಗಿದೆ. ಕಿಗ್ಗಾ ಋಷ್ಯಶೃಂಗೇಶ್ವರ ದೇಗುಲದಲ್ಲಿ ಗ್ರಹಣದ ಆರಂಭದಿಂದ ಅಂತ್ಯದವರೆಗೆ ಜಲಾಭಿಷೇಕ ನಡೆಯಲಿದೆ.