ನವದೆಹಲಿ : ದೆಹಲಿಗೆ ಹಾರಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಾಜ್ಯ ರಾಜಕೀಯದ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯ ಜನಪಥನಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ನಾವು ಅಸ್ಸಾಂ ಮತ್ತು ಬೇರೆ ಬೇರೆ ರಾಜ್ಯಗಳ ಚುನಾವಣೆಗಳ ಕುರಿತು ಚರ್ಚೆ ಮಾಡಿದ್ದೇವೆ. ನಮಗೆ ಇರುವಂತಹ ಎಲ್ಲಾ ವರದಿಗಳನ್ನು ಕೂಡ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಚರ್ಚೆ ಮಾಡಿದ್ದೇವೆ ಎಂದರು.
ನಾನು ಒಳಗಡೆ ಯಾರ ಜೊತೆ ಏನು ಮಾತಾಡಿದೆ ಎನ್ನುವುದರ ಕುರಿತು ಬೀದಿಯಲ್ಲಿ ನಿಂತು ರಾಜಕಾರಣ ಮಾಡಲು ಆಗಲ್ಲ ನಾವು ನಮ್ಮ ವರಿಷ್ಠರ ಭೇಟಿ ಮಾಡಿದ್ದೇವೆ ಏನು ಮಾತನಾಡಬೇಕು ಮಾತನಾಡಿದ್ದೇವೆ. ಎಲ್ಲ ವಿಚಾರಗಳನ್ನು ತಿಳಿಸಲೇಬೇಕಲ್ವಾ ಹಾಗಾಗಿ ತಿಳಿಸಿದ್ದೇನೆ. ಏನು ಬೇಕು ಅದೆಲ್ಲರ ಕುರಿತು ಮಾತನಾಡಿದ್ದು ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.
ಇದೀಗ ಕಾಂಗ್ರೆಸ್ ಪಟ್ಟದ ಆಟ ರೋಚಕ ಘಟ್ಟಕ್ಕೆ ತಲುಪಿದೆ. ಹೈಕಮಾಂಡ್ ಮಟ್ಟದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಫೈನಲ್ ಆಟ ಆಡಿದ್ದು, ತಡರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದು ತೀವ್ರ ಕುತೂಹಲ ಮೂಡಿಸಿದೆ.








