ಬೆಳಗಾವಿ : ಕಳೆದ ಕೆಲವು ದಿನಗಳ ಹಿಂದೆ ಬೆಳಗಾವಿ ನಗರದ ಗಣೇಶಪುರದಲ್ಲಿ ಅಪಾರ್ಟ್ಮೆಂಟ್ ಮನೆಯೊಂದಕ್ಕೆ ನುಗ್ಗಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ, ಮೈಮೇಲಿನ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಹಣಕಾಸಿನ ವ್ಯವಹಾರ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀ ನಗರದ ಜ್ಯೋತಿ ಬಾಂದೇಕರ್, ಅವರ ಪುತ್ರಿ ಸುಹಾನಿ ಬಾಂದೇಕರ್ ಮತ್ತು ಓರ್ವ ಬಾಲಕನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1.70 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ ಪೊಲೀಸರು, ಬಳಿಕ ಅವರ ಆರೋಗ್ಯ ಪರೀಕ್ಷೆಯನ್ನು ನಡೆಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ.
ಕೊಲೆಗೆ ಕಾರಣ ಏನು?
ಕೊಲೆಯಾದ ಅಂಜನಾ ದಡ್ಡಿಕರ್ ಸಾವಿಗೆ ಕೇವಲ 15 ಸಾವಿರ ರೂಪಾಯಿ ಕಾರಣವಾಗಿದೆ. ಕೋವಿಡ್ ಸಮಯದಲ್ಲಿ ಅಂಜನಾ ಅವರಿಂದ 15 ಸಾವಿರ ರೂ. ಸಾಲವನ್ನು ಜ್ಯೋತಿ ಪಡೆದಿದ್ದರು. ಇದಕ್ಕೆ ಮಾಸಿಕವಾಗಿ ಶೇ. 10ರಷ್ಟು ಬಡ್ಡಿ ಕೊಡಬೇಕು ಎಂದು ಇಬ್ಬರ ನಡುವೆ ಒಪ್ಪಂದ ಆಗಿತ್ತು. ಅದರಂತೆ ಪ್ರತಿ ತಿಂಗಳು ಅಂಜನಾ ದಡ್ಡೀಕರ್ಗೆ ಜ್ಯೋತಿ 1500 ರೂ. ಬಡ್ಡಿ ಪಾವತಿಸುತ್ತಿದ್ದರು.
ಆದರೇ ಕಳೆದ ಕೆಲ ತಿಂಗಳಿಂದ ಜ್ಯೋತಿ ಬಡ್ಡಿ ಕಟ್ಟಿರಲಿಲ್ಲ. ಹಾಗಾಗಿ, ಅಂಜನಾ ತನ್ನ ಪತಿಯ ಜೊತೆಗೆ ಜ್ಯೋತಿ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಜ್ಯೋತಿ ನಿಮ್ಮ ಮನೆಗೆ ಬಂದು ವ್ಯವಹಾರ ಬಗೆಹರಿಸುತ್ತೇನೆ ಎಂದು ಅಂಜನಾಗೆ ಹೇಳಿ ವಾಪಸ್ ಕಳುಹಿಸಿದ್ದರು.ಅದೇ ದಿನ ಮಧ್ಯಾಹ್ನ ಪುತ್ರ, ಪುತ್ರಿ ಜೊತೆಗೆ ಅಂಜನಾ ವಾಸವಿದ್ದ ಅಪಾರ್ಟ್ಮೆಂಟ್ಗೆ ಜ್ಯೋತಿ ಬಂದಿದ್ದಾರೆ. ಆಗ ಜ್ಯೋತಿ ಹಾಗೂ ಅಂಜನಾ ಅವರ ನಡುವೆ ಗಲಾಟೆಯಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಆಗ ಅಂಜನಾ ತಲೆ ಗ್ಯಾಸ್ ಕಟ್ಟೆಗೆ ತುಗಲಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನು ನೋಡಿ ಗಾಬರಿಯಾದ ಜ್ಯೋತಿ ಹಾಗೂ ಅವರ ಇಬ್ಬರು ಮಕ್ಕಳು ಆಕೆಯ ಮೈ ಮೇಲಿದ್ದ ಚಿನ್ನಾಭಾರಣ ಕಳ್ಳತನ ಮಾಡಿ ಪರಾರಿಯಾಗಿದ್ದರು.ಕೊಲೆಯಾದ ಅಂಜನಾ ಅವರ ಪುತ್ರಿ ಅಕ್ಷತಾ ಪಾಟೀಲ್ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಓರ್ವ ಅಪ್ರಾಪ್ತ ಸೇರಿ ಆತನ ತಾಯಿ ಮತ್ತು ಸಹೋದರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.