ಬೆಳಗಾವಿ : ಕಳೆದ ವರ್ಷ ರಾಜ್ಯ ಬರಕ್ಕೆ ತುತ್ತಾಗಿದ್ದರೆ, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಬೆಳೆಹಾನಿಯಾಗಿದೆ. ಬರ ಪರಿಹಾರವಾಗಿ ರಾಜ್ಯ ಸರ್ಕಾರ ಕಳೆದ ವರ್ಷ ರೂ.4200 ಕೋಟಿ ಹಣವನ್ನು ರೈತರಿಗೆ ಪರಿಹಾರದ ರೂಪದಲ್ಲಿ ನೀಡಿದರೆ, ಮಳೆಹಾನಿಗೆ ಈ ವರ್ಷ ರೂ.297 ಕೋಟಿ ಹಣವನ್ನು ಪರಿಹಾರವಾಗಿ ರೈತರಿಗೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ಶುಕ್ರವಾರ ಶೂನ್ಯವೇಳೆ ಚರ್ಚೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾದ ಮಳೆಹಾನಿ ಹಾಗೂ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸದನಕ್ಕೆ ಉತ್ತರ ನೀಡಿದ ಅವರು, “ಕಳೆದ ವರ್ಷದ ಬರ ಗಾಲದಲ್ಲಿ ರಾಜ್ಯ ಸರ್ಕಾರ 45 ಲಕ್ಷ ರೈತರಿಗೆ ರೂ.4200 ಕೋಟಿ ಹಣ ಪರಿಹಾರ ನೀಡಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ವರ್ಷ ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆ 115 ಮಿ.ಮೀ. ಆದರೆ, ವಾಸ್ತವದಲ್ಲಿ 151 ಮಿ.ಮೀ ಮಳೆಯಾಗಿದೆ. ಮುಂಗಾರಿನಲ್ಲಿ ವಾಡಿಕೆ 852 ಮಿ.ಮೀ. ಆದರೆ, 928 ಮಿ.ಮೀ ಮಳೆಯಾಗಿದೆ. ಹಿಂಗಾರಿನಲ್ಲಿ ವಾಡಿಕೆ ಮಳೆ 173 ಮಿ.ಮೀ. ವಾಸ್ತವವಾಗಿ 213 ಮಿ.ಮೀ ಮಳೆಯಾಗಿದೆ. ಎಲ್ಲಾ ಸೇರಿ ಒಟ್ಟಾರೆ ವಾಡಿಕೆಗಿಂತ ಶೇ.20 ರಷ್ಟು ಹೆಚ್ಚು ಮಳೆಯಾಗಿದೆ. ಎಲ್ಲಾ ಕಡೆ ಒಂದೇ ರೀತಿ ಮಳೆಯಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯೂ ಆಗಿದೆ” ಎಂದು ತಿಳಿಸಿದರು.
ಮುಂದುವರೆದು, “ಪ್ರಸ್ತುತ ಮುಂಗಾರು ಅವಧಿಯಲ್ಲಿ 1,59,718 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. ಆಯಾ ಬೆಳೆಗೆ ಅನುಗುಣವಾಗಿ ಒಟ್ಟು ರೂ.94.94 ಕೋಟಿ ಪರಿಹಾರ ವಿತರಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ 1,45,254 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೂ.112.17 ಕೋಟಿ ಹಣವನ್ನು ರೈತರಿಗೆ ಪರಿಹಾರವಾಗಿ ಮಂಜೂರು ಮಾಡಲಾಗಿದೆ. ಕೆಲವು ಭಾಗದಲ್ಲಿ ರೈತರಿಗೆ ಪರಿಹಾರ ಹಣ ಖಾತೆಗೆ ಜಮಾ ಆಗಿದೆ. ಕೆಲವು ಭಾಗಗಳಲ್ಲಿ ಆಗುತ್ತಿದೆ. ಮುಂದಿನ ಒಂದೆರಡು ವಾರದಲ್ಲಿ ಎಲ್ಲಾ ರೈತರ ಖಾತೆಗಳಿಗೂ ಪರಿಹಾರ ಹಣ ಸಂದಾಯವಾಗಲಿದೆ. ಆದರೆ, ಕಳೆದ ವರ್ಷ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಕೇಂದ್ರದಿಂದ ಬರ ಪರಿಹಾರ ಹಣ ಪಡೆದಿತ್ತು. ಆದರೆ, ಈ ವರ್ಷದ ಎನ್‌ಡಿಆರ್‌ಎಫ್ ಹರಿಹಾರದ ಹಣ ಇನ್ನೂ ಸಂದಾಯವಾಗಿಲ್ಲ” ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಇತರೆ ಪರಿಹಾರಗಳು…
ನಮ್ಮ ರಾಜ್ಯದಲ್ಲಿ 10 ಹವಾಮಾನ ವಲಯಗಳಿವೆ (ಆಗ್ರೋ ಕ್ಲೈಮ್ಯಾಟಿಕ್ ಝೋನ್). ಇಲ್ಲಿ 450 ಮಿ.ಮೀ ರಿಂದ 4,000 ಮಿ.ಮೀ ವರೆಗೆ ವಾಡಿಕೆ ಮಳೆಯಾಗುವ ವೈವಿಧ್ಯತೆಯ ಪ್ರದೇಶಗಳು ಕರ್ನಾಟಕದಲ್ಲಿದೆ. ದೇಶದ ಯಾವ ರಾಜ್ಯದಲ್ಲೂ ಈ ವೈವಿಧ್ಯತೆ ಇಲ್ಲ. ಇದರಿಂದ ರಾಜ್ಯದಲ್ಲಿ ಕೆಲ ಪ್ರಾಣಹಾನಿಯೂ ಸಂಬಂವಿಸಿದೆ. ಕೆಲವರು ಹೊಳೆ ಉಕ್ಕಿಹರಿಯುವ ಸಂದರ್ಭದಲ್ಲಿ ನೀರಿನಲ್ಲಿ ಇಳಿದು ಕೊಚ್ಚಿಹೋಗಿದ್ದಾರೆ. ಕೆರೆ ತುಂಬಿದೆ ಎಂದು ಗೊತ್ತಿದ್ದರೂ ಈಜಲು ಹೋಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಿಡಿಲು ಬಡಿತದಿಂದ ಮೃತಪಟ್ಟವರೂ ಸೇರಿ ಈ ವರ್ಷ ಒಟ್ಟಾರೆ 133 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರದ ಕಡೆಯಿಂದ ಇಂತಹ ಘಟನೆಗಳಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಅಲ್ಲದೆ, ಈ ಎಲ್ಲಾ ಮೃತರ ಕುಟುಂಬಗಳಿಗೆ ಈಗಾಗಲೇ ತಲಾ ರೂ.5 ಲಕ್ಷ ಪರಿಹಾರ ನೀಡಲಾಗಿದೆ. ಇದಕ್ಕೆಂದು ರೂ. 6.64 ಕೋಟಿ ವ್ಯಯಿಸಲಾಗಿದೆ.” ಎಂದರು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಾನುವಾರು ಪ್ರಾಣಹಾನಿ ಕಡಿಮೆಯಾಗಿದೆ. 714 ಸಣ್ಣ-ದೊಡ್ಡ ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಇದಕ್ಕೆಂದು ರೂ. 1.20 ಕೋಟಿ ಪರಿಹಾರ ನೀಡಲಾಗಿದೆ. ಇದಲ್ಲದೆ, 20,893 ಮನೆಗಳು ಸಣ್ಣಪುಟ್ಟ ಅಥವಾ ಭಾಗಶಃ ಹಾನಿಯಾಗಿವೆ. 3,200 ಮನೆಗಳು ಪೂರ್ತಿ ಹಾನಿಯಾಗಿವೆ. ಮನೆಗಳ ಪರಿಹಾರಕ್ಕಾಗಿ ರೂ. 82.20 ಕೋಟಿ ಹಣ ಪಾವತಿ ಮಾಡಿದ್ದೇವೆ. ಇವೆಲ್ಲವೂ ಸೇರಿ ಈ ವರ್ಷ ಮಳೆಹಾನಿಗೆ ಸಂಬಂಧಿಸಿದಂತೆ ಒಟ್ಟಾರೆ ರೂ.297 ಕೋಟಿ ಪರಿಹಾರವನ್ನು ತೊಂದರೆಗೆ ಒಳಪಟ್ಟವರಿಗೆ ಹಾಗೂ ರೈತರಿಗೆ ಪಾವತಿಸಲಾಗಿದೆ ಎಂದರು.
ಎಲ್ಲೆಲ್ಲಿ ಮಳೆಹಾನಿ..?
ಈ ವರ್ಷ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾದ ಕಾರಣ ಕೃಷ್ಣಾ ನದಿ ಉಕ್ಕಿ ಹರಿದು ನದಿಪಾತ್ರದ ಜನರಿಗೆ ಹಾನಿಯಾಗಿತ್ತು. ತುಂಗಭದ್ರಾ, ಭೀಮಾ, ಕಬಿನಿ ಕಾವೇರಿಯಲ್ಲೂ ಹೆಚ್ಚು ನೀರು ಬಂದು ಹಾನಿಯಾಗಿತ್ತು. ಧಾರವಾಡದ ಬೆಣ್ಣೆಹಳ್ಳ, ಬಾಗಲಕೋಟೆ ಬಳ್ಳಾರಿ, ಶಿವಮೊಗ್ಗ ಭಾಗದಲ್ಲೂ ಮಳೆಯಿಂದಾಗಿ ನದಿಗಳು ಉಕ್ಕಿಹರಿದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ರಸ್ತೆ, ಸೇತುವೆ, ಶಾಲಾ ಕೊಠಡಿ, ಅಂಗನವಾಡಿ, ಆರೋಗ್ಯ ಕೇಂದ್ರ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಕೆಲ ವಿದ್ಯುತ್ ಸಂಪರ್ಕ ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಆಯಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ ರಿಪೇರಿ ಕೆಲಸಗಳಿಗೆ ಹಾಗೂ ತುರ್ತು ಪರಿಹಾರಕ್ಕಾಗಿ ರೂ.80.47 ಕೋಟಿ ಅನುಧಾನ ನೀಡಲಾಗಿದೆ. ಈ ಪೈಕಿ ರೂ. 60.16 ಕೋಟಿ ಹಣ ಈಗಾಗಲೇ ಬಿಡುಗಡೆಮಾಡಲಾಗಿದೆ. ಇಷ್ಟು ಹಣ ಖರ್ಚು ಮಾಡಿಯೂ ಸಹ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಖಾತೆಯಲ್ಲಿ ಮುಂದಿನ ತುರ್ತು ಪರಿಹಾರಕ್ಕಾಗಿ ಸುಮಾರು ರೂ 579 ಕೋಟಿ ಅನುಧಾನ ಒಡಗಿಸಿಕೊಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮನೆಗೆ ನೀರು ನುಗ್ಗಿದವರಿಗೆ ದಿನ ನಿತ್ಯದ ಖರ್ಚು ನಿಭಾಯಿಸಲು 5,000 ರೂಪಾಯಿ ನೀಡಲಾಗಿತ್ತು. ಇದಕ್ಕೆಂದು ರೂ. 5.62 ಕೋಟಿ ಅನುದಾನ ನೀಡಿದ್ದೇವೆ. ಮನೆಯಲ್ಲಿ ವಾಸವಿರಲು ಸಾಧ್ಯವಿಲ್ಲ ಎಂಬಂತಹ ಸ್ಥಿತಿಗೆ ಒಳಗಾದವರಿಗಾಗಿ 290 ಕಾಳಜಿ ಕೇಂದ್ರ ತೆರೆದು 25,914 ಸಂತ್ರಸ್ತರಿಗೆ ಆಶ್ರಯ ಊಟ ಉಪಚಾರ ಮಾಡಿದ್ದೇವೆ. ಅಲ್ಲದೆ, ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಹೆಚ್ಚಾಗಿದೆ ಆ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ತುಕಡಿಗಳನ್ನು ನಿಯೋಜಿಸಿ ತುರ್ತು ಪರಿಹಾರ ಕೆಲಸ ಕೈಗೊಳ್ಳಲು ಸೂಚಿಸಲಾಗಿತ್ತು ಎಂದರು.
ಭೂ ಕುಸಿತ ತಡೆಗೆ ಶಾಶ್ವತ ಪರಿಹಾರ ಯೋಜನೆ
ಈ ವರ್ಷ ಭೂ ಕುಸಿತ ಪ್ರಕರಣ ನಿರೀಕ್ಷೆಗಿಂತ ಹೆಚ್ಚಾಗಿದೆ.ಕಾರವಾರದ ಘಟನೆ ಎಲ್ಲರನ್ನೂ ಘಾಸಿಗೊಳಿಸಿದೆ. ಮಲೆನಾಡು ಭಾಗದಲ್ಲೂ ಸಣ್ಣಪುಟ್ಟ ಭೂ ಕುಸಿತದ ಘಟನೆ ಸಂಭವಿಸಿದೆ. ಈ ನಿಟ್ಟಿನಲ್ಲಿ ಭೂ ಕುಸಿತವನ್ನು ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಲಾಗಿದೆ ಎಂದು ಸದನಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಈ ಬಗ್ಗೆ ಗಮನ ಸೆಳೆದ ಅವರು, “ಭೂ ಕುಸಿತ ತಡೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚಿಸಿ ಅವರ ಸೂಚನೆ ಹಿನ್ನೆಲೆ ಎರಡೂವರೆ ವರ್ಷದ ಅವಧಿಗೆ ರೂ.400 ಕೋಟಿ ರೂಪಾಯಿ ವೆಚ್ಚದಲ್ಲಿ ಭೂ ಕುಸಿತ ತಡೆಗಟ್ಟುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೇವೆ. ಭೂ ಕುಸಿತಕ್ಕೆ ಒಳಗಾಗಬಹುದಾದ ಪ್ರದೇಶಗಳ ಬಗ್ಗೆ ನ್ಯಾಷನಲ್ ಜಿಯೋಲಾಜಿಕಲ್ ಸರ್ವೇ ಎಂಬ ಕೇಂದ್ರ ಸರ್ಕಾರದ ಸಂಸ್ಥೆಯಿಂದ ವರದಿ ತರಿಸಲಾಗಿದೆ. ಆ ವರದಿಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ 6 ಜಿಲ್ಲೆಗಳ 863 ಗ್ರಾಮ ಪಂಚಾಯಿತಿಗಳನ್ನು ಭೂ ಕುಸಿತ ಉಂಟಾಗಬಹುದಾದ ಪ್ರದೇಶಗಳು ಎಂದು ಗುರುತಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಭೂ ಕುಸಿತ ತಡೆಯುವ ಸಂಬಂಧಿ ಯೋಜನೆಗಳ ಕುರಿತು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗಿದೆ. ರೂ. 425 ಕೋಟಿ ಮೌಲ್ಯದ ಯೋಜನೆಗಳಿಗೆ ಜಿಲ್ಲಾಧಿಕಾರಿಗಳು ಮನವಿ ನೀಡಿದ್ದಾರೆ. ಭೂ ಕುಸಿತ ತಡೆಗಟ್ಟುವ ಕಾಮಗಾರಿಗೆ ಹಣ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಅದರ ಭಾಗವಾಗಿ ತತಕ್ಷಣ ರೂ.152 ಕೋಟಿ ಹಣವನ್ನು ವಿವಿಧ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿದೆ. ಇದಲ್ಲದೆ, ಮಳೆ ಹೆಚ್ಚಾದಾಗ ನಗರ ಪ್ರದೇಶಗಳಲ್ಲಿ ನೀರನ್ನು ಹೊರಹಾಕುವ ಮೂಲಭೂತ ವ್ಯವಸ್ಥೆ ಇಲ್ಲ. ಇದೂ ಸಹ ಪ್ರವಾಹಕ್ಕೆ ಕಾರಣವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರೂ. 184 ಕೋಟಿ ಮೌಲ್ಯದ 259 ಕಾಮಗಾರಿಗಳಿಗೆ ತತಕ್ಷಣ ಅನುಮೋದನೆ ನೀಡಲಿದ್ದೇವೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿಗೆ 5000 ಕೋಟಿ
ಮಳೆಗಾಲದಲ್ಲಿ ಬೆಂಗಳೂರಿನಲ್ಲೂ ಸಹ ನೀರು ಒಳ ಚರಂಡಿಯಲ್ಲಿ ಹರಿಯದೆ ರಸ್ತೆ ಮೇಲೆ ಹರಿಯುವ ಕಾರಣ ಪ್ರವಾಹ ಸ್ಥಿತಿ ಉಂಟಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿಗೆ ವಿಶ್ವಸಂಸ್ಥೆ ಸಹಯೋಗದಲ್ಲಿ ರೂ.5,000 ಕೋಟಿ ಹಣ ವ್ಯಯಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಈ ಬಗ್ಗೆಯೂ ಸದನಕ್ಕೆ ಮಾಹಿತಿ ನೀಡಿದ ಅವರು, “ಬೆಂಗಳೂರಿನಲ್ಲೂ ಸಹ ಈ ವರ್ಷದ ಮಳೆಗಾಲದಲ್ಲಿ ಎಥೇಚ್ಚ ಹಾನಿ ಉಂಟಾಗಿದೆ. ಮಳೆ ನೀರು ರಸ್ತೆಗಳ ಮೇಲೆ ಹರಿದು ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಪರಿಣಾಮ ಜನ ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾ ಕಾಲುವೆಗಳ ವ್ಯವಸ್ಥೆಯನ್ನು ಪರಿಪಕ್ವವಾಗಿ ಅಭಿವೃದ್ಧಿ ಮಾಡಬೇಕು ಎಂದು ತೀರ್ಮಾನಿಸಿ ಕಂದಾಯ ಇಲಾಖೆಗೂ ಜವಾಬ್ದಾರಿ ನೀಡಿದ್ದಾರೆ. ಬೆಂಗಳೂರಿನಲ್ಲಿ 856 ಕಿಮೀ ರಾಜಕಾಲುವೆಗಳು ಇವೆ. ಕೆಲವು ಕಡೆ ಮೂರನೇ ಹಂತದ ಕಾಲುವೆಗಳು 200 ಕಿಮೀ ಎಂದು ಗುರುತಿಸಲಾಗಿದೆ. ಕಾಲುವೆಗಳನ್ನು ಹೆಚ್ಚು ನೀರು ಕೊಂಡೊಯ್ಯಲು ಶಾಶ್ವತ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದ್ದು, 350 ಕಿಮೀ ಅಭಿವೃದ್ಧಿಗೆ ಯೋಜನೆ ರೂಪಿಸಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ರೂ. 240 ಕೋಟಿ ಕೆಲ ತಿಂಗಳಲ್ಲಿ ಟೆಂಡರ್‌ಗೆ ಹೋಗಲಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಬಾಕಿ ಇರುವ ಎಲ್ಲಾ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಅವರು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ಮುಂದುವರೆದು, ರಾಜಕಾಲುವೆ ಅಭಿವೃದ್ಧಿಗೆ ಒನ್ ಟೈಮ್ ಪ್ರಾಜೆಕ್ಟ್ ಬಗ್ಗೆ ವಿಶ್ವಬ್ಯಾಂಕ್ ಜೊತೆ ಮಾತುಕತೆ ನಡೆಸಿ ರೂ. 3000 ಕೋಟಿ ಹಣ ಸಾಲ ಪಡೆದು ಬೆಂಗಳೂರಿನಲ್ಲಿ ಮಳೆ ತೋಂದರೆ ನೀಗಿಸುವ ಕಾಮಗಾರಿಗಳನ್ನು ತೆಗೆದುಕೊಳ್ಳುವ ಯೋಜನೆ ರೂಪಿಸಿದ್ದೇವೆ.ಈ ಪೈಕಿ 2000 ಕೋಟಿ ಹಣವನ್ನು ರಾಜಕಾಲುವೆ ಸರಿಪರಿಸಲು ಬಿಬಿಎಂಪಿಗೆ ಹಾಗೂ 1000 ಕೋಟಿ ಹಣವನ್ನು ಬಿಡಬ್ಲ್ಯುಎಸ್‌ಎಸ್‌ಬಿ ಗೆ ನೀಡಿ ಎಲ್ಲೆಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲ ಅಲ್ಲಿ ಕಾಮಗಾರಿ ನಡೆಸಲು ತಿಳಿಸಲಾಗುವುದು. ಇದಲ್ಲದೆ, ನಮ್ಮ ಹಣಕಾಸು ಇಲಾಖೆ ಹಾಗೂ ವಿಪತ್ತು ನಿರ್ವಹಣೆ ಇಲಾಖೆಯಿಂದಲೂ ರೂ 2,000 ಕೋಟಿ ಹಣವನ್ನು ರಾಜಕಾಲುವೆ ಅಭಿವೃದ್ಧಿಗೆ ನೀಡಲಾಗುವುದು” ಎಂದು ತಿಳಿಸಿದರು.