ಬೆಂಗಳೂರು : ಈ ಬಾರಿ ಗ್ರಾಮ ಪಂಚಾಯತಿಗಳಲ್ಲಿ ₹1,271 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಅತಿ ಹೆಚ್ಚು ಕರಸಂಗ್ರಹಣೆಯ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮೀಣ ನೀರು ಸರಬರಾಜು ಇಲಾಖೆಯು ಗ್ರಾಮೀಣ ಕರ್ನಾಟಕದ ಕುಡಿಯುವ ನೀರು ಸರಬರಾಜು ಸ್ಥಿಗತಿಗಳ ಕುರಿತು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ, ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜಿನಿಯರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು,ದೇಶದಲ್ಲಿನ ಪಂಚಾಯತ್ ಸಂಸ್ಥೆಗಳಲ್ಲಿ ಕರ್ನಾಟಕ ಅಳವಡಿಸಿಕೊಂಡಿರುವ ಪದ್ಧತಿಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರಥಮ ಸ್ಥಾನ ನೀಡಿದೆ. ಈ ಬಾರಿ ಗ್ರಾಮ ಪಂಚಾಯತಿಗಳಲ್ಲಿ ₹1,271 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಅತಿ ಹೆಚ್ಚು ಕರಸಂಗ್ರಹಣೆಯ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ ಎಂದರು.
ಜಿಲ್ಲೆಗಳಲ್ಲಿ ಅತ್ಯಂತ ದುರ್ಬಲವಾಗಿರುವ ಗ್ರಾಮ ಪಂಚಾಯತಿಯನ್ನು ಆರಿಸಿಕೊಂಡು ಅವುಗಳ ಸಮಗ್ರ ಅಭಿವೃದ್ಧಿ ಸಲುವಾಗಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ‘ಕಾಯಕ ಗ್ರಾಮ’ ಯೋಜನೆಯಡಿ ದತ್ತು ಸ್ವೀಕಾರ ಮಾಡಬೇಕೆಂದು ಸಲಹೆ ನೀಡಿದ್ದಾರೆ.
ಗ್ರಾಮಗಳಲ್ಲಿ ಸುಸ್ಥಿರ ಜಲ ಹಾಗೂ ಸುಸ್ಥಿರ ವಿದ್ಯುತ್ ಸರಬರಾಜು ಮಾಡುವ ಮಹತ್ತರ ಆಶಯವನ್ನು ಈ ಬಾರಿ ಕಾರ್ಯಗತಗೊಳಿಸಲು ಮೊದಲ ಹೆಜ್ಜೆ ಇರಿಸಲಾಗಿದೆ. ಗ್ರಾಮಗಳ ಸುಧಾರಣೆ, ಆರ್ಥಿಕ ಸುಸ್ಥಿರತೆಯ ಬಗ್ಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ವತಂತ್ರವಾಗಿ ಯೋಚನೆ ಮಾಡಬೇಕು. ಪ್ರವಾಸಿ ಸ್ಥಳಗಳಲ್ಲಿನ ಗ್ರಾಮ ಪಂಚಾಯತಿ ಆಸ್ತಿಗಳನ್ನು ವರಮಾನ ಮೂಲ ಆಸ್ತಿಗಳನ್ನಾಗಿಸಬೇಕು ಎಂದು ಸೂಚನೆ ನೀಡಿದ್ದಾರೆ.