ಬೆಂಗಳೂರು : ಉದ್ದೇಶ ಪೂರ್ವಕವಾಗಿ ದ್ವಿಚಕ್ರವಾಹನದ ಕಡೆ ಕಾರನ್ನು ತಿರುಗಿಸಿ ಅಪಘಾತವೆಸಗಿದ ಆರೋಪದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ವಿರುದ್ಧ ಪೊಲೀಸರು ದಾಖಲಿಸಿದ್ದ ಕೊಲೆಯತ್ನ ಪ್ರಕರಣವನ್ನು ರದ್ದಪಡಿಸಲು ನಿರಾಕರಿಸಿದ ಹೈಕೋರ್ಟ್, ರೋಡ್ ರೇಜ್ ಯಾವುದೇ ಕ್ಷಮೆಯಿರುವುದಿಲ್ಲ ಎಂದು ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಘಟನೆ ನಡೆದ ಸಂದರ್ಭದಲ್ಲಿ ಅವರು ಕಚೇರಿಗೆ ಹೋಗುತ್ತಿದ್ದರು. ಅಪಘಾತ ನಡೆಸಬೇಕು ಎಂಬ ಯಾವುದೇ ಉದ್ದೇಶ ಅವರಿಗಿರಲಿಲ್ಲ. ಆದರೆ, ಎಫ್ಐಆರ್ ನಲ್ಲಿ ತಪ್ಪಾಗಿ ಕೊಲೆ ಯತ್ನ ಆರೋಪ ದಾಖಲಿಸಲಾಗಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.
ಅರ್ಜಿದಾರರು ಸಾಫ್ಟ್‌ವೇರ್ ಎಂಜಿನಿಯರ್ ಸಾಫ್ಟ್ ಆಗಿ ಇರಬೇಕಾಗಿತ್ತು. ಅವರಿಗೆ ತಾಳ್ಮೆ ಇರಲಿಲ್ಲ ಎಂದರೆ ಏನೂ ಮಾಡೋಕೆ ಆಗಲ್ಲ. ಬೆಂಗಳೂರು ಸಂಚಾರ ದಟ್ಟಣೆ ತಾಳ್ಮೆ ಕಲಿಸಲಿದೆ. ಆದರೆ, ನಿಮಗೆ ಅದು ಇರಬೇಕು. ರೋಡ್ ರೇಜ್‌ಗೆ ಕ್ಷಮೆಯೇ ಇಲ್ಲ ಎಂದು ತಿಳಿಸಿತು. ಅಲ್ಲದೆ, ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಅರ್ಜಿದಾರರು ಮತ್ತೊಮ್ಮೆ ಅದನ್ನು ಪ್ರಶ್ನಿಸಿ ಬರಬಹುದು. ಆ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕಾಯ್ದಿರಿಸಿ, ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ಆದೇಶಿಸಿತು.
ಪ್ರಕರಣದ ಹಿನ್ನೆಲೆ
2025ರ ಅಕ್ಟೋಬರ್ 26ರಂದು ಅಂಕಿತಾ ಪಾಟೀಲ್ ಮತ್ತು ವಿನೇಶ್ ದಂಪತಿಯು ಹೋಂಡಾ ಡಿಯೊ ಸ್ಕೂಟರ್‌ನಲ್ಲಿ ಪುತ್ರ ಕಲ್ಪ ಜೈನ್ ಕೂರಿಸಿಕೊಂಡು ತಿಂಡ್ಲುವಿನಿಂದ ಇಂದಿರಾನಗರಕ್ಕೆ ಹೊರಟಿದ್ದರು. ಎಂ ಎಸ್ ರಾಮಯ್ಯ ಆಸ್ಪತ್ರೆಯ ಸಿಗ್ನಲ್ ಬಳಿ ಅರ್ಜಿದಾರ ಸುಕೃತ್ ಕೇಶವ್ ಗೌಡ ಅವರ ಕೆಂಪು ಬಣ್ಣದ ಟಾಟಾ ಕರ್ವ್ ಕಾರು ನಿಂತಿತ್ತು. ಈ ವೇಳೆ, ಸಿಗ್ನಲ್ ಬಿಟ್ಟಿದ್ದರೂ ಕಾರು ನಿಂತಲ್ಲಿಯೇ ನಿಂತಿತ್ತು. ಇದರಿಂದ ವಿನೀಶ್ ಹಾರ್ನ್ ಮಾಡಿ, ಮುಂದೆ ಹೋಗಲು ಸಲಹೆ ನೀಡಿದ್ದರು.
ಇದರಿಂದ ಅಸಮಾಧಾನಗೊಂಡಿದ್ದ ಅರ್ಜಿದಾರ, ವಿನೀಶ್ ಮುಂದೆ ಹೋಗುತ್ತಿದ್ದಂತೆ ಹಿಂದಿನಿಂದ ಬಂದು ಅಜಾಗರೂಕತೆಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದ. ಇದರಿಂದ ಸ್ಕೂಟರ್‌ನಲ್ಲಿದ್ದವರೆಲ್ಲರೂ ಕೆಳಗೆ ಬಿದ್ದು ಚಾಲಕ ವಿನೇಶ್‌ಗೆ ಎಡಭಾಗದ ರಿಬ್ಸ್‌ಗೆ ಪೆಟ್ಟಾಗಿತ್ತು. ಈ ಸಂಬಂಧ ಸದಾಶಿವನಗರ ಸಂಚಾರ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 281,125(ಎ) ಮತ್ತು ಮೋಟಾರು ವಾಹನ ಕಾಯಿದೆ ಸೆಕ್ಷನ್‌ಗಳಾದ 134 (ಎ ಮತ್ತು ಬಿ) ಮತ್ತು 187ರ ಅಡಿ ಪ್ರಕರಣ ದಾಖಲಿಸಲಾಗಿತ್ತು.








