ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಸಚಿವರ ಹನಿಟ್ರ್ಯಾಪ್ ಭಾರಿ ಸದ್ದು ಮಾಡಿದ್ದು, ಆಡಳಿತ ಮತ್ತು ವಿಪಕ್ಷಗಳು ಇದರ ವಿರುದ್ಧ ಧ್ವನಿ ಎತ್ತಿದವು. ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದರು. ಇದಕ್ಕೆ ಸ್ಪಷ್ಟನೆ ನೀಡಿದ ರಾಜಣ್ಣ ನನ್ನ ಮೇಲೂ ಹನಿಟ್ರ್ಯಾಪ್ ಗೆ ಪ್ರಯತ್ನ ನಡೆದಿದೆ.48ಕ್ಕೂ ಹೆಚ್ಚು ರಾಜ್ಯ & ಕೇಂದ್ರ ರಾಜಕಾರಣಿಗಳ ‘ಅಶ್ಲೀಲ ಪೆನ್ ಡ್ರೈವ್’ ಗಳಿವೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಹನಿ ಟ್ರಾಪ್ ಬಗ್ಗೆ ಸದನದಲ್ಲಿ ಯತ್ನಾಳ್ ಪ್ರಸ್ತಾಪ ಮಾಡಿದ್ದರು. ಹನಿ ಟ್ರ್ಯಾಪ್ ನಲ್ಲಿ ಎಲ್ಲಾ ಪಕ್ಷದವರು ಸಿಲುಕಿದ್ದಾರೆ. ಈ ರೀತಿ ತೇಜೋವಧೆ ಮಾಡುವುದು ಯಾರಿಗೂ ಶೋಭೆ ತರಲ್ಲ. ಇದು ಅಂತ್ಯವಾಗಲು ಉನ್ನತ ಮಟ್ಟದ ತನಿಖೆ ಆಗಬೇಕು. ನನ್ನ ಮೇಲೂ ಹನಿಟ್ರ್ಯಾಪ್ ಗೆ ಪ್ರಯತ್ನ ನಡೆದಿದೆ. ಆದರೆ ನಾನು ಹನಿಟ್ರ್ಯಾಪ್ ಗೆ ಒಳಗಾಗಿಲ್ಲ ಎಂದು ಅವರು ತಿಳಿಸಿದರು.
ಶಾಸಕ ಯತ್ನಾಳ್ ಪ್ರಸ್ತಾಪ ವೇಳೆ ನನ್ನ ಹೆಸರು ಉಲ್ಲೇಖ ಮಾಡಿದರು. ನಾನು ವಾಸ್ತವಾಂಶದ ಸ್ಪಷ್ಟಿಕರಣ ಕೊಟ್ಟಿದ್ದೇನೆ. ಎಚ್ ಡಿ ರೇವಣ್ಣ, ಪ್ರಜ್ವಲ್ ಹಾಗೂ ರಮೇಶ್ ಜಾರಕಿಹೊಳಿ ಇರಬಹುದು. ಶಾಸಕರು, ಮಾಜಿ ಶಾಸಕರದ್ದು ಇರಬಹುದು. ಕೇವಲ ನನ್ನ ಮೇಲೆ ಅಷ್ಟೆ ಅಲ್ಲ. ಅದರ ಜೊತೆಗೆ ರಾಜ್ಯ & ಕೇಂದ್ರ ರಾಜಕಾರಣಿಗಳ ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಗಳು ಸಹ ಇವೆ. ಸುಮಾರು 48 ಜನರ ಅಶ್ಲೀಲ ಪೆನ್ ಡ್ರೈವ್ ಗಳಿವೆ ಎಂದು ಸ್ಫೋಟಕವಾದ ಹೇಳಿಕೆ ನೀಡಿದರು.