ಬೆಂಗಳೂರು : ಇಂದು ಕರ್ನಾಟಕದಲ್ಲಿ ಬಹು ದೊಡ್ಡ ಶರಣಾಗತಿ ಆಗಲಿದ್ದು, ಚಿಕ್ಕಮಂಗಳೂರಿನಲ್ಲಿ ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ಆರು ಜನ ನಕ್ಸಲರು ಜಿಲ್ಲಾಡಳಿತದ ಮುಂದೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಶರಣಾಗಲಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿ ಶರಣಾಗುವ ನಕ್ಸಲರ ವಿರುದ್ಧ ಹಲವು ಪ್ರಕರಣಗಳಿದ್ದು ಆ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಲ್ಲಿ ಇಂದು ನಕ್ಸಲರು ಶರಣಾಗತಿ ಆಗುತ್ತಿರುವ ವಿಚಾರವಾಗಿ, ಬಾಕಿ ಉಳಿದ ವಿಚಾರವಾಗಿ ನಾನು ಈಗ ಮಾತನಾಡುವುದಿಲ್ಲ. ಆದರೆ ವಿಕ್ರಂ ಎನ್ಕೌಂಟರ್ ವೇಳೆ ನಕ್ಸಲರಿಗೆ ಶರಣಾಗಲು ಕರೆ ನೀಡಲಾಗಿತ್ತು. ಕಾಡಿನಲ್ಲಿದ್ದು ಈ ರೀತಿ ಜೀವನ ಏಕೆ ಮಾಡುತ್ತಿದ್ದೀರಿ, ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಅಂತ ಹೇಳಿದ್ದೇವೆ. ನಕ್ಸಲರ ವಿರುದ್ಧ ಹಲವು ಪ್ರಕರಣಗಳಿವೆ ನಿಜ, ಪ್ರಕರಣಗಳ ವಿಚಾರದಲ್ಲಿ ಕಾನೂನು ಪ್ರಕಾರ ಕ್ರಮ ಆಗಲಿದೆ ಎಂದು ತಿಳಿಸಿದರು.