ಶಿವಮೊಗ್ಗ : ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ cm ಕುರ್ಚಿ ಕುರಿತು ಮಾತನಾಡಿದ್ದು, ನಾನು ಮುಖ್ಯಮಂತ್ರಿ ಆಗುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ ಕಾರ್ಯಕರ್ತರ ಪ್ರಯತ್ನದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಪ್ರತಿಕ್ರಿಯಿಸಿದರು.
ಜಾರ್ಜ್ ರಾಜೀನಾಮೆ ಬಗ್ಗೆ ನನಗೇನೂ ಗೊತ್ತಿಲ್ಲ. ವಿಪಕ್ಷದವರು ಏನಾದರೊಂದು ಹೇಳುತ್ತಲೇ ಇರುತ್ತಾರೆ. ಯಾರೇ ಆದರೂ ಅಧಿಕಾರಿಗಳೊಂದಿಗೆ ಮಾತನಾಡುವುದರಲ್ಲಿ ತಪ್ಪೇನಿಲ್ಲ. ನಮ್ಮ ಕಾರ್ಯಕರ್ತರು ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಲೇ ಇರುತ್ತಾರೆ. ಆಗ ಅಧಿಕಾರಿಗಳಿಗೆ ನಾವು ಕೆಲವೊಂದು ಸೂಚನೆ ನೀಡಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಇನ್ಯಾವುದೇ ರೀತಿಯ ಹಸ್ತಕ್ಷೇಪದ ವಿಚಾರ ನನಗೆ ಗೊತ್ತಿಲ್ಲ ಎಂದರು.
ಗಾಂಧಿ ಹೆಸರನ್ನು ತೆಗೆದು ಹಾಕಿ, ಅದೇ ಗಾಂಧಿ ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡುವ ಬಿಜೆಪಿ-ಜೆಡಿಎಸ್‌ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಡಿಕೆಶಿ, ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮಾಗಾಂಧಿ ಹೆಸರಿಡುವಂತೆ ಮನವಿ ಮಾಡಿದ್ದೇವೆ ಎಂದರು. ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ಇದ್ದ ವಾಹನ ನಾಪತ್ತೆ ಪ್ರಕರಣ ಸಂಬಂಧ ಕೇಂದ್ರ ಸರಕಾರ ಸಿಬಿಐ ತನಿಖೆ ನಡೆಸಲಿ, ಎಲ್ಲಿತ್ತು ಎಂದು ಹೇಳಲಿ. ಅದು ಕಾಂಗ್ರೆಸ್‌ಗೆ ಸೇರಿದ್ದು ಎಂದು ಹೇಳಿ ಸುಮ್ಮನೆ ನಗೆ ಪಾಟಲಿಗೀಡಾಗುವುದು ಬೇಡ ಎಂದು ತಿರುಗೇಟು ನೀಡಿದರು.








