ಬೆಳಗಾವಿ : ತಾಲೂಕಿನ ಮಚ್ಚೆ ಗ್ರಾಮದಲ್ಲಿ ಫೆ.19ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಯಾರೋ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿರುವ ಆರೋಪ ಕೇಳಿ ಬಂದಿತ್ತು. ಆದರೆ, ಈ ನೈಜವಾಗಿ ಅಲ್ಲಿ ಯಾರೂ ಮಸಿ ಬಳಿದು ಅವಮಾನ ಮಾಡಿಲ್ಲ. ಬದಲಾಗಿ, ಮರದಿಂದ ಸುರಿದ ದ್ರಾವಣವು ಪ್ರತಿಮೆ ಮೇಲೆ ಬಿದ್ದಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಸ್ಪಷ್ಟನೆ ನೀಡಿದ್ದಾರೆ.
ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮೇಲೆ ದ್ರವರೂಪದ ವಸ್ತು ಬಿದ್ದಿತ್ತು. ಅದನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದು ಯಾವುದೇ ರೀತಿಯ ಮಸಿ ಅಥವಾ ಬಣ್ಣವಲ್ಲ. ಮರದಿಂದ ಸುರಿದ ದ್ರವ ಪದಾರ್ಥ ಎಂದು ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ.
ಗುರುವಾರ ರಾತ್ರಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಕೆಲ ಯುವಕರು ಸೂಕ್ಷ್ಮವಾಗಿ ಗಮನಿಸಿದಾಗ ಕಪ್ಪು ಮಸಿ ಅಂತೆ ಕಾಣಿಸಿತ್ತು. ಯಾರೋ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ ಎಂದು ಅಂತಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ, ಘೋಷಣೆ ಕೂಗಲು ಶುರು ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದರು.








