ಬೆಂಗಳೂರು : ರಾಜ್ಯ ಸರ್ಕಾರ ಇದೀಗ ಮತ್ತೊಂದು ಪೇಚಿಗೆ ಸಿಲುಕಿದ್ದು, ಕೇವಲ ಸರ್ಕಾರಿ ಕಾಮಗಾರಿ ನಡೆಸಿ ಗುತ್ತಿಗೆದಾರರ ಬಾಕಿ ಹಣ ಮಾತ್ರ ಉಳಿಸಿಕೊಂಡಿತ್ತು. ಆದರೆ ಇದೀಗ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆದುಕೊಳ್ಳಲು ಹೋರಾಡಿ ಜೈಲು ಶಿಕ್ಷೆ ಅನುಭವಿಸಿದ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಗೌರವಧನವನ್ನು ಹಲವು ತಿಂಗಳಿಂದ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರ ಮೊತ್ತವೇ 4.85 ಕೋಟಿ ರೂಪಾಯಿ ದಾಟಿದೆ.
ರಾಜ್ಯದಲ್ಲಿ 150 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಮಾಸಿಕ 10 ಸಾವಿರ ರೂಪಾಯಿ ಗೌರವಧನ ಪಡೆಯುತ್ತಿದ್ದಾರೆ. ಮೃತಪಟ್ಟ ಸ್ವಾತಂತ್ರ್ಯ ಯೋಧರ ಶವ ಸಂಸ್ಕಾರಕ್ಕೆ ಸರ್ಕಾರ 4 ಸಾವಿರ ರೂಪಾಯಿ ನೀಡುತ್ತದೆ. ಧಾರವಾಡದಲ್ಲಿ 34, ಬೆಳಗಾವಿಯಲ್ಲಿ 30, ತುಮಕೂರು 15, ಕಲಬುರಗಿಯಲ್ಲಿ 10 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 150 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಗೌರವಧನ ಪಡೆಯುತ್ತಿದ್ದಾರೆ. ಕೆಲ ತಿಂಗಳಿಂದ ಸರ್ಕಾರವು ಮಾಸಾಶನ ನೀಡಿಲ್ಲ. ಇದರಿಂದ 4.85 ಕೋಟಿ ರೂಪಾಯಿ ಗೌರವಧನ ಬಾಕಿ ಉಳಿಸಿಕೊಂಡಿದೆ.