ಬೆಂಗಳೂರು : ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಇತ್ತೀಚಿಗೆ HD ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಮಾಡದಿದ್ದಕ್ಕೆ ಹಾಗು ಕೋರ್ ಕಮಿಟಿಯಿಂದ ಕೈ ಬಿಟ್ಟಿದ್ದಕ್ಕೆ ಬೇಸರ ಹೊರಹಕಿದ್ದಾರೆ.
ಜೆಡಿಎಸ್ ಶಾಸಕಾಂಗ ನಾಯಕ ಸ್ಥಾನ ನೀಡುತ್ತೇವೆಂದು ಆಶ್ವಾಸನೆ ನೀಡಿ ಕೊನೆಗೆ ಬೇರೆಯವರಿಗೆ ಆ ಸ್ಥಾನ ನೀಡಿದರು. ಈಗ ಪಕ್ಷದ ಕೋರ್ ಕಮಿಟಿಯಿಂದಲೂ ನನ್ನನ್ನು ಕೇಳದೆ ಕೈಬಿಟ್ಟರು. ಈ ಎಲ್ಲದರಿಂದ ನನಗೆ ನೋವಾಗಿದೆ. ಹಾಗೆಂದ ಮಾತ್ರಕ್ಕೆ ನಾನು ಪಕ್ಷ ಬಿಡುವುದಿಲ್ಲ. ನನ್ನ ಮಿತಿಯಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಪಕ್ಷದ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಪಾಂಡವಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದ ವೇಳೆ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಎಲ್ಲರೂ ಜೆಡಿಎಸ್ ಶಾಸಕಾಂಗ ನಾಯಕ ಸ್ಥಾನ ನಿಮಗೆ ನೀಡಲಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು. ಆದರೆ, ಮರುದಿನವೇ ಸುರೇಶ್ ಬಾಬು ಅವರನ್ನು ಜೆಡಿಎಲ್‌ಪಿ ನಾಯಕನ್ನಾಗಿ ಆಯ್ಕೆ ಮಾಡಿರುವ ಪತ್ರವನ್ನು ಸ್ಪೀಕರ್ ಕಚೇರಿಗೆ ಕಳುಹಿಸಿದರು. ಅದಾದ ನಂತರವೂ ನನಗೆ ಮಾಹಿತಿ ನೀಡಲಿಲ್ಲ. ಇದು ನನಗೆ ನಿಜಕ್ಕೂ ಆಘಾತವನ್ನುಂಟು ಮಾಡಿತು ಎಂದರು. ಇದೇ ರೀತಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವಾಗಲೂ ನನ್ನನ್ನು ಸಂಪರ್ಕಿಸಲಿಲ್ಲ. ಇವೆಲ್ಲವೂ ನನಗೆ ನೋವುಂಟು ಮಾಡಿದೆ ಎಂದರು.








