ಮೈಸೂರು : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಬೆನ್ನಲ್ಲೆ ಇದೀಗ ದೇಶದೇಲ್ಲೆಡೆ ಭದ್ರತೆ ವಿಚಾರವಾಗಿ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಮೈಸೂರು ಅರಮನೆಯ ಸುತ್ತಮುತ್ತಲು ಡ್ರೋನ್ ಹಾರಾಟ ನಿಷೇಧಿಸಿ ಅರಮನೆ ಆಡಳಿತ ಮಂಡಳಿ ಈ ಕುರಿತು ಆದೇಶ ಹೊರಡಿಸಿದೆ.
ಹೌದು ಭದ್ರತೆಯ ದೃಷ್ಟಿಯಿಂದ ವಿಶ್ವವಿಖ್ಯಾತ ಮೈಸೂರು ಅಂಬಾವಿಲಾಸ ಅರಮನೆ ಸುತ್ತ ಡ್ರೋನ್ ಹಾರಾಟ ನಿಷೇಧಿಸಿ ಅರಮನೆಯ ಆಡಳಿತ ಮಂಡಳಿಯ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಅರಮನೆಯ ನಾಲ್ಕು ಪ್ರಮುಖ ದ್ವಾರದಲ್ಲಿ ಪ್ರಕಟಣೆ ಫಲಕ ಹಾಕಿದ್ದಾರೆ.
ನಾಡಹಬ್ಬ ದಸರಾ ಸಂದರ್ಭದಲ್ಲಿ ಹಾಗೂ ಗಜಪಡೆ ತಾಲೀಮು ವೇಳೆ ಕೆಲವರು ಶೋಕಿಗಾಗಿ ಮನಸ್ಸೋ ಇಚ್ಛೆ ಡ್ರೋನ್ ಹಾರಿಸಿ ಉದ್ದಟತನ ಪ್ರದರ್ಶಿಸಿದ್ದ ಬೆನ್ನಲ್ಲೇ ಅರಮನೆ ಸೇರಿದಂತೆ ಸುತ್ತಲಿನ ಪ್ರದೇಶವನ್ನು ಹಳದಿ (ಯಲ್ಲೋ) ವಲಯ ನಿರ್ಬಂಧಿಸಿತ್ತು. ಇದೀಗ ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿರುವುದರಿಂದ ಇದೀಗ ಡ್ರೋನ್ ಹಾರಾಟದ ಮೇಲೆ ನಿಗಾ ಇಡಲಾಗಿದೆ.