ಬೆಂಗಳೂರು : ಜಾತಿ ಗಣತಿ ವಿಚಾರವಾಗಿ ಇಂದು ಮಧ್ಯಾಹ್ನ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯ ಲಿಖಿತವಾಗಿ ಸಲ್ಲಿಕೆಯಾಗಲಿದ್ದು, ಕೇಂದ್ರ ಸರ್ಕಾರವೂ ಜಾತಿಗಣತಿ ಘೋಷಿಸಿರುವುದರಿಂದ ರಾಜ್ಯದ ಜಾತಿಗಣತಿ ವರದಿ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆಯಾಗುವ ನಿರೀಕ್ಷೆಯಿದೆ.
2015ರಲ್ಲಿ ನಡೆದಿದ್ದ ಸಮೀಕ್ಷೆಯ ವರದಿಯನ್ನು 2024ರ ಫೆ. 29ರಂದು ರಾಜ್ಯ ಸರಕಾರ ಸ್ವೀಕರಿಸಿತ್ತಲ್ಲದೆ, ಸಂಪುಟ ಸಭೆಯ ಮುಂದೆಯೂ ಪ್ರಸ್ತಾವನೆ ಮಂಡಿಸಿತ್ತು. ವರದಿಯ ಪ್ರತಿಯನ್ನು ಸಚಿವರಿಗೆ ನೀಡಿ ಅಧ್ಯಯನ ಮಾಡಿಕೊಂಡು ಬರಲು ತಿಳಿಸಿತ್ತು. ಆದರೂ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಲಿಖಿತವಾಗಿ ಅಭಿಪ್ರಾಯ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದರು.
ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯ ಕುರಿತು ಈ ಹಿಂದೆ ಏಪ್ರಿಲ್ 17, 2025ರಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು. ಈ ಆಕ್ಷೇಪಗಳನ್ನು ಪರಿಗಣಿಸಿ, ಸಚಿವರಿಗೆ ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಲು ಸೂಚಿಸಲಾಗಿತ್ತು.ಇಂದು ನಡೆಯುವ ಸಂಪುಟ ಸಭೆಯಲ್ಲಿ ಈ ಅಭಿಪ್ರಾಯಗಳು ಸಲ್ಲಿಕೆಯಾಗಲಿದ್ದು, ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯಿಂದ ಉತ್ತರ ನೀಡಲಾಗುವುದು. ಜಾತಿಗಣತಿ ವರದಿಯ ಭವಿಷ್ಯದ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯದೊಂದಿಗೆ ಕೂಲಂಕಷ ಚರ್ಚೆ ನಡೆಯಲಿದೆ.
ಮೂಲಗಳ ಪ್ರಕಾರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ಜಾತಿಗಣತಿ ನಿರ್ಧಾರ ಸ್ವಾಗತಿಸುವ ಸಾಧ್ಯತೆಯಿದೆ. ಇದೇ ವೇಳೆ ಕೇಂದ್ರ ಸರ್ಕಾರ ಕೇವಲ ಜಾತಿಗಣತಿ ಮಾಡಿದರೆ ಸಾಲದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕು. ಜತೆಗೆ ಮೀಸಲಾತಿಗೆ ನಿಗದಿ ಮಾಡಿರುವ ಶೇ.50 ರಷ್ಟು ಮಿತಿ ತೆಗೆಯಬೇಕು ಎಂದು ಒತ್ತಾಯಿಸಿ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸುವ ಸಾಧ್ಯತೆಯಿದೆ.