ದಾವಣಗೆರೆ : ರಾಜ್ಯದಲ್ಲಿ ಬಾಣಂತಿಯರ ಸಾವು ಮುಂದುವರೆದಿದ್ದು ಈಗ ದಾವಣಗೆರೆಯಲ್ಲಿ ಹೆರಿಗೆಯಾದ ಎರಡು ದಿನಕ್ಕೆ ಬಾಣಂತಿಯೊಬ್ಬರು ಸಾವನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮೃತ ಬಾಣಂತಿಯನ್ನು ದುರ್ಗಮ್ಮ (21) ಎಂದು ತಿಳಿದುಬಂದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ತನ್ನ ತಾಯಿ ಮನೆಗೆ ಹೆರಿಗೆ ಬಂದಿದ್ದ ಅವರಿಗೆ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪೋಷಕರು ತಕ್ಷಣ ಹತ್ತಿರದ ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.
ಹರಪನಹಳ್ಳಿ ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಹೆಣ್ಣು ಮಗು ಜನಿಸಿತ್ತು. ಬಳಿಕ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆರೋಗ್ಯದಲ್ಲಿ ಏರುಪೇರು ಆದ ಬಳಿಕ ದುರ್ಗಮ್ಮ ಸಾವನ್ನಪ್ಪಿದ್ದಾರೆ. ಬಾಣಂತಿ ಸಾವಿನ ನಂತರ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.