ಬೆಂಗಳೂರು : ರಾಜ್ಯದಲ್ಲಿ ಶಿಶು ಮರಣ ಹಾಗೂ ಜನನ ಪ್ರಮಾಣ ದರದಲ್ಲಿ ಇಳಿಕೆ ಕಂಡಿದೆ. ರಿಜಿಸ್ಟರ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಮಾದರಿ ನೋಂದಣಿ ವ್ಯವಸ್ಥೆ (ಎಸ್ಆರ್ಎಸ್) ಇದು ಬಹಿರಂಗಗೊಂಡಿದೆ. ಈ ಕುರಿತು ರಿಜಿಸ್ಟರ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ 2023 ಎಸ್ಆರ್ಎಸ್ನಲ್ಲಿ ಜನನ ದರ, ಮರಣ ದರ, ನೈಸರ್ಗಿಕ ಬೆಳವಣಿಗೆ ದರ ಮತ್ತು ಶಿಶು ಮರಣ ದರ (ಐಎಂಆರ್)ಗಳ ಅಂದಾಜುಗಳನ್ನು ನೀಡಲಾಗಿದೆ.
ಮಾದರಿ ನೋಂದಣಿ ವ್ಯವಸ್ಥೆ ಎಂಬುದು ಶಿಶು ಮರಣ ಪ್ರಮಾಣ, ಜನನ ಪ್ರಮಾಣ, ಮರಣ ಪ್ರಮಾಣ ಮತ್ತು ಇತರ ಫಲವತ್ತತೆ ಮತ್ತು ಮರಣ ಸೂಚಕಗಳ ವಾರ್ಷಿಕ ಅಂದಾಜುಗಳನ್ನು ಒದಗಿಸಲು ನಡೆಸುವ ಭಾರತದ ಅತಿ ದೊಡ್ಡ ಜನಸಂಖ್ಯಾ ಸಮೀಕ್ಷೆ ಆಗಿದೆ. ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಭಾರತದ ರಿಜಿಸ್ಟ್ರಾರ್ ಜನರಲ್ ಕಚೇರಿಯಿಂದ ಪ್ರತಿ ವರ್ಷ ನಡೆಸಲ್ಪಡುವ ದೊಡ್ಡ ಪ್ರಮಾಣದ ಜನಸಂಖ್ಯಾ ಸಮೀಕ್ಷೆಯಾಗಿದೆ.
ಕಳೆದ ಐದು ದಶಕಗಳಿಗೆ ಹೋಲಿಕೆ ಮಾಡಿದರೆ ದೇಶದೆಲ್ಲೆಡೆ ಜನನ ದರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. 1971ರಲ್ಲಿ 36.9ರಷ್ಟಿದ್ದ ಜನನ ದರ 2023ರಲ್ಲಿ 18.4ರಷ್ಟಿದೆ. 2023ರಲ್ಲಿ ಜನನದರದಲ್ಲಿ ಗ್ರಾಮೀಣ ಮತ್ತು ನಗರದ ನಡುವೆ ಇದ್ದ ವ್ಯತ್ಯಾಸವೂ ಕಡಿಮೆಯಾಗಿದೆ. 2023ರಲ್ಲಿ, ದೇಶದ ಜನನ ದರ 18.4 ಎಂದು ಅಂದಾಜಿಸಲಾಗಿದೆ, ಆದರೆ ಮರಣ ದರ 6.4 ಎಂದು ಅಂದಾಜಿಸಲಾಗಿದೆ. 2023 ರ ಶಿಶು ಮರಣ ದರದ ಪ್ರತಿ ಸಾವಿರ ಜನನಗಳಿಗೆ 25 ಶಿಶು ಸಾವುಗಳು ಎಂದು ಅಂದಾಜಿಸಲಾಗಿದೆ.








