ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಡಳಿತ ಮಂಗಳವಾರದಿಂದ ಚಾಲನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ನಿಯಮ ರೂಪಿಸಿರುವ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ಹಾಗಾಗಿ ಇಷ್ಟು ದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಎಂದು ಗುರುತಿಸಲ್ಪಡುತ್ತಿದ್ದದ್ದು ಇದೀಗ ಇತಿಹಾಸದ ಪುಟ ಸೇರಿತು.
ಬಿಬಿಎಂಪಿ ಆಡಳಿತ ವ್ಯಾಪ್ತಿಯನ್ನು 5 ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೆ ಈ ನಗರ ಪಾಲಿಕೆಗಳ ಮೇಲೆ ನಿಗಾ ವಹಿಸಲು ಜಿಬಿಎ ರಚಿಸಲಾಗಿದ್ದು, ಮಂಗಳವಾರದಿಂದ ಬಿಬಿ ಎಂಪಿ ರದ್ದಾಗಿ ಜಿಬಿಎ ಆಡಳಿತ ಆರಂಭವಾಗಲಿದೆ. ಅದಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಂತಿಮ ಅಧಿಸೂಚನೆ ಪ್ರಕಟವಾಗ ಲಿದೆ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ನಾಮಫಲಕಗಳು ಮಂಗಳ ವಾರವೇ ಬದಲಾಗಲಿದೆ.
ಅದಕ್ಕೂ ಮುನ್ನ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಲ್ಲಿ ಕೈಗೊಳ್ಳಲಾಗುವ ಚುನಾವಣೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಿ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ. ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವವರ ವೆಚ್ಚದ ಮಿತಿಯನ್ನು 5 ಲಕ್ಷ ರು.ಗೆ ನಿಗದಿ, ಚುನಾವಣೆ ನಡೆಯುವ ಸಂದರ್ಭದಲ್ಲಿ ನಕಲಿ ಮತದಾರರ ಕುರಿತಂತೆ ದೂರು ಬಂದಾಗ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಮತ್ತಿತರ ಅಂಶಗಳು ಅಧಿಸೂಚನೆ ಒಳಗೊಂಡಿದೆ.






