ಬೆಂಗಳೂರು : ರಾಜ್ಯಾದ್ಯಂತ ನಿನ್ನೆ ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯ ಪತ್ರಿಕೆ-1ಕ್ಕೆ ಶೇ.93.35 ಅಭ್ಯರ್ಥಿಗಳು ಹಾಗೂ ಪತ್ರಿಕೆ-2ಕ್ಕೆ ಶೇ.94.79 ಅಭ್ಯರ್ಥಿಗಳು ಹಾಜರಾಗಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ 903 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಒಟ್ಟು 3.35 ಲಕ್ಷ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದರು.
ಹಾವೇರಿಯ ಇಜಾರಿಲಕಮಾಪುರ ಪಿಯು ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಟಿಇಟಿ (ಪರೀಕ್ಷೆ)ಗೆ ಹಾಜರಾಗಲು ಬಂದಿದ್ದ ಮಹಿಳಾ ಅಭ್ಯರ್ಥಿಗಳ ಗಾಜಿನ ಬಳೆ, ಕಿವಿ ಓಲೆ, ಕಾಲು ಚೈನು ತೆಗೆದಿರಿಸಿ ಪರೀಕ್ಷಾ ಕೊಠಡಿಗೆ ಬರುವಂತೆ ಸಿಬ್ಬಂದಿ ಸೂಚನೆ ನೀಡಿದರು. ಈ ರೀತಿಯ ನಿಯಮ ಇಲ್ಲದಿದ್ದರೂ ಬಳೆ, ಕಿವಿಯೋಲೆ ತೆಗೆಸಿದ್ದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಇದನ್ನು ಅಲ್ಲಗಳೆದಿರುವ ಡಿಡಿಪಿಐ ಮೋಹನ ದಂಡಿನ್, ನಮ್ಮ ಸಿಬ್ಬಂದಿಗೆ ನಿಯಮದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ರೀತಿಯ ಘಟನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.








