ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿಯಿಂದ ವಂಚನೆ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿ ಸಮೀಪದ ಹೊಸಹಳ್ಳಿಯ ಸರಕಾರಿ ಪ್ರೌಢ ಶಾಲಾ ಶಿಕ್ಷಕ ನರಸಿಂಹಮೂರ್ತಿ (59) ಎಂಬುವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನರಸಿಂಹಮೂರ್ತಿ, ಹೊಸಕೋಟೆ ತಾಲೂಕಿನ ಜಡಗನಹಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರು ಜ.15ರಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಮಾಗಡಿ ರಸ್ತೆಯ ತುಂಗಾನಗರದಲ್ಲಿ ಅವರಿಗೆ ಸೇರಿದ 25 ಗುಂಟೆ ಜಮೀನಿದ್ದು, ಅದರ ಮಾರಾಟದಲ್ಲಿ ವಂಚನೆಯಾಗಿದೆ. ತುಂಗಾನಗರದ ಜಮೀನನ್ನು 10 ಕೋಟಿ ರೂ.ಗೆ ಖರೀದಿಸುವುದಾಗಿ ಹೇಳಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ಎಂಬಾತ ನರಸಿಂಹಮೂರ್ತಿ ಅವರಿಗೆ ಮುಂಗಡವಾಗಿ 10 ಲಕ್ಷ ರೂ. ಕೊಟ್ಟು ಕರಾರು ಮಾಡಿಕೊಂಡಿದ್ದ. ಬಾಕಿ ಹಣವನ್ನು ನಂತರ ಕೊಡುವುದಾಗಿ ನಂಬಿಸಿ, ಕ್ರಯಪತ್ರ ಸಹ ಮಾಡಿಸಿಕೊಂಡು ವಂಚಿಸಿದ್ದ. ಕೆಲ ದಿನಗಳ ಬಳಿಕ ನರಸಿಂಹಮೂರ್ತಿ ಹಣ ಕೇಳಿದಾಗ ಸತೀಶ್, ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ನರಸಿಂಹಮೂರ್ತಿ ಆತ್ಮಹತ್ಯೆಗೂ ಡೆತ್ ನೋಟ್ ಬರೆದಿಟ್ಟಿದ್ದು, ಡೆತ್ ನೋಟ್ ನಲ್ಲಿ ಸತೀಶ್ ಸೇರಿದಂತೆ 9 ಜನರ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ ಎನ್ನಲಾಗಿದೆ.