ಬೆಂಗಳೂರು : ಆಸ್ತಿ ವರ್ಗಾವಣೆ ಮಾಡಿಕೊಂಡು ಪೋಷಕರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳ ವಿರುದ್ದ Suo Moto case ದಾಖಲಿಸುವ ಕುರಿತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮಹತ್ವದ ಆದೇಶ ಹೊರಡಿಸಿದೆ.
ಇತ್ತೀಚೆಗೆ ರಾಜ್ಯದಲ್ಲಿ ವೃದ್ಧ ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆಯ ನಂತರ ಪೋಷಕರನ್ನು ಮನೆಗೆ ಕರೆದುಕೊಂಡು ಹೋಗದೆ ಆಸ್ಪತ್ರೆಯಲ್ಲೆ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ವೃದ್ಧ ಪೋಷಕರನ್ನು ವಿಚಾರಿಸಿದಾಗ ಮಕ್ಕಳು ಪೋಷಕರ ಆಸ್ತಿಯನ್ನು ತಮ್ಮ ಹೆಸರುಗಳಿಗೆ ಬರೆಸಿಕೊಂಡು ಪೋಷಕರನ್ನು ನೋಡಿಕೊಳ್ಳಲು ಆಗದೇ, ಆರ್ಥಿಕ ಸಂಕಷ್ಟಗಳ ನೆಪ ಹೇಳಿ ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ ಮತ್ತು ವಸತಿ ಉಚಿತವಾಗಿ ಸಿಗುತ್ತದೆ ಎಂದು ತಿಳಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿಯೇ ಬಿಟ್ಟು ಹೋಗುತ್ತಿರುವುದು ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾನ್ಯ ಸಚಿವರ ಗಮನಕ್ಕೆ ಬಂದಿರುತ್ತದೆ.
ಪೋಷಕರು ಮತ್ತು ಹಿರಿಯ ನಾಗರೀಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಸೆಕ್ಷನ್ 23 ರ ಪ್ರಕಾರ, ಮಕ್ಕಳು ಆಸ್ತಿಯನ್ನು ಆನುವಂಶಿಕವಾಗಿ ಪಡೆದ ನಂತರ ಹೆತ್ತವರನ್ನು ನಿರ್ಲಕ್ಷಿಸಿದರೆ ಅಥವಾ ತ್ಯಜಿಸಿದರೆ, ವಿಲ್ ಅಥವಾ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಲು ಮತ್ತು ವಯಸ್ಸಾದ ಪೋಷಕರಿಗೆ ಮಾಲೀಕತ್ವವನ್ನು ಪುನಃ ಪಡೆಯಲು ದಾವೆಯನ್ನು ದಾಖಲಿಸಬಹುದಾಗಿದ್ದು, ಯಾವುದೇ ಪೋಷಕರು / ಹಿರಿಯ ನಾಗರೀಕರು ದಾವ ಹೂಡಲು ಅಸಮರ್ಥನಾಗಿದ್ದರೆ, ಸಂಘಗಳ ನೋಂದಣಿ ಕಾಯ್ದೆ, 1860 ರ ಅಡಿಯಲ್ಲಿ ನೋಂದಾಯಿಸಲಾದ ಯಾವುದೇ ಸ್ವಯಂಸೇವಾ ಸಂಘ / ಸಂಸ್ಥೆಯು ಅವರ ಪರವಾಗಿ ದಾವೆ ದಾಖಲಿಸಲು ಕ್ರಮ ತೆಗೆದುಕೊಳ್ಳಬಹುದು ಎಂದು ಉಲ್ಲೇಖಿಸಲಾಗಿದೆ.
ಆದ್ದರಿಂದ ತಮ್ಮ ಸಂಸ್ಥೆಗಳಲ್ಲಿ ಈ ಕುರಿತಾಗಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯನ್ನು ಇಂದೇ ನಿರ್ದೇಶನಾಲಯಕ್ಕೆ ಸಲ್ಲಿಸಲು ಮತ್ತು ಇಂತಹ ಪ್ರಕರಣಗಳಲ್ಲಿ ಸಂಸ್ಥೆಯ ನಿರ್ದೇಶಕರು ನಿಯಮಾನುಸಾರ Suo Moto case ದಾಖಲಿಸುವ ಕುರಿತು ಅಗತ್ಯ ಕ್ರಮ ವಹಿಸಲು ಸೂಚಿಸಿದೆ.