ಬೆಂಗಳೂರು : ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಆಯಾ ಕಂದಾಯ ವೃತ್ತ / ಕೇಂದ್ರ ಸ್ಥಾನಗಳಲ್ಲಿಯೇ ವಾಸ್ತವ್ಯವಿದ್ದು ಸಾರ್ವಜನಿಕರಿಗೆ ಲಭ್ಯವಾಗುವ ಕುರಿತು ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಆಯಾ ಕಂದಾಯ ವೃತ್ತ / ಕೇಂದ್ರ ಸ್ಥಾನಗಳಲ್ಲಿ ಕಡ್ಡಾಯವಾಗಿ ವಾಸ್ತವ್ಯವಿದ್ದು ಕರ್ತವ್ಯ ನಿರ್ವಹಿಸುವಂತೆ ಉಲ್ಲೇಖಿತ ಸುತ್ತೋಲೆಗಳಲ್ಲಿ ಸೂಚನೆ ನೀಡಲಾಗಿರುತ್ತದೆ. ಅದಾಗ್ಯೂ, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಅವರುಗಳು ಕರ್ತವ್ಯ ನಿರ್ವಹಿಸುವ ಕಂದಾಯ ವೃತ್ತಗಳಲ್ಲಿ / ಕೇಂದ್ರ ಸ್ಥಾನಗಳಲ್ಲಿ ವಾಸವಿರದೇ ಸಾರ್ವಜನಿಕರಿಗೆ ಕಛೇರಿ ವೇಳೆಯಲ್ಲಿ ಲಭ್ಯವಾಗುತ್ತಿಲ್ಲ ಹಾಗೂ ಇದರಿಂದಾಗಿ ಸಾರ್ವಜನಿಕರು ಬಹಳ ತೊಂದರೆಯನ್ನು ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಆದುದರಿಂದ, ಈಗಾಗಲೇ ಉಲ್ಲೇಖಿತ ಸುತ್ತೋಲೆಗಳಲ್ಲಿ ನೀಡಿರುವ ಸೂಚನೆಗಳನ್ನು ಎಲ್ಲಾ ರಾಜಸ್ವ ನಿರೀಕ್ಷಕರು | ಗ್ರಾಮ ಆಡಳಿತ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಸಂಬಂಧಪಟ್ಟ ತಹಶೀಲ್ದಾರ್‌ಗಳು ಈ ಕುರಿತು ಪರಿಶೀಲನೆ ನಡೆಸಿ, ದೂರುಗಳು ಹಾಗೂ ಲೋಪ-ದೋಷಗಳು ಕಂಡುಬಂದಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡತಕ್ಕದ್ದು.
ಸರ್ಕಾರದ ಸೂಚನೆಗಳನ್ನು ಜಿಲ್ಲಾಧಿಕಾರಿಯವರು ಗಂಭೀರವಾಗಿ ಪರಿಗಣಿಸಿ ಒಂದು ವೇಳೆ ಸಾರ್ವಜನಿಕರಿಗೆ ರಾಜಸ್ವ ನಿರೀಕ್ಷಕರು / ಗ್ರಾಮ ಆಡಳಿತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಛೇರಿಯ ವೇಳೆಯಲ್ಲಿ ಲಭ್ಯವಾಗದೇ ಕೆಲಸ-ಕಾರ್ಯಗಳಿಗೆ ತೊಂದರೆಯಾಗಿರುವುದನ್ನು ಖಚಿತಪಡಿಸಿಕೊಂಡು ಅಂತಹವರ ವಿರುದ್ಧ ನಿಯಮಾಸುಸಾರ ಶಿಸ್ತುಕ್ರಮ ಕೈಗೊಳ್ಳುವಂತೆ ಹಾಗೂ ಕೈಗೊಂಡ ಕ್ರಮದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದೆ.