ಬೆಂಗಳೂರು : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 14 ನವಂಬರ್ 2024ರಿಂದ 24 ಜನವರಿ 2025 ರವರೆಗೆ, 10 ವಾರಗಳ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ’ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಒಂದು ದಿನ “ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸುವ ಕುರಿತು
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಭಾಗವಹಿಸುವಿಕೆ ಹಕ್ಕು ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿಗಳಿಂದ ಮಕ್ಕಳ ಗ್ರಾಮ ಸಭೆಯನ್ನು ನಡೆಸಲು 2006 ರಲ್ಲಿ ಉಲ್ಲೇಖ(1) ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅಧ್ಯಾಯ || ರ ಪ್ರಕರಣ 3(ಎಚ್)(2)(1) (2015ರ ತಿದ್ದುಪಡಿಯಂತೆ)ರಲ್ಲಿ ನಿರ್ದೇಶಿಸಿರುವಂತೆ ಪ್ರಮುಖವಾದ ನಿಲುವನ್ನು ತೆಗೆದುಕೊಂಡಿದೆ. ಇದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989, ಭಾರತದ ಸಂವಿಧಾನದಲ್ಲಿ ಮಕ್ಕಳಿಗಿರುವ ಹಕ್ಕುಗಳನ್ನು ಮಾನ್ಯ ಮಾಡುವುದರಲ್ಲಿ ಮಹತ್ತರವಾದ ಹೆಜ್ಜೆಯಾಗಿದೆ. 2006ರಲ್ಲಿ ಉಲ್ಲೇಖ(2)ರ ಸುತೋಲೆಯನ್ನು ಹೊರಡಿಸುವುದರ ಮೂಲಕ ಗ್ರಾಮೀಣಾಭಿವೃದ್ಧಿಯಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ನೀಡಲಾಗಿದೆ. 2006 ರಿಂದ ಪ್ರತಿ ವರ್ಷವೂ ಮಕ್ಕಳ ಗ್ರಾಮ ಸಭೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ಭಾರತ ಸರ್ಕಾರವು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು- 2030 ನ್ನು ಒಪ್ಪಿಕೊಂಡಿದ್ದು ಮಕ್ಕಳ ಆರೋಗ್ಯ ರಕ್ಷಣೆ, ಶಿಕ್ಷಣ ಅಭಿವೃದ್ಧಿ ಸಾಧನೆ ಹಾಗೂ ಹಸಿವು, ತಾರತಮ್ಯ ಮತ್ತು ಶೋಷಣೆ ಕೊನೆಗೊಳಿಸುವುದಕ್ಕೆ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಪರಿಸ್ಥಿತಿಯನ್ನು ತಳಮಟ್ಟದಿಂದಲೇ ಗಮನಿಸಿ ಅವಶ್ಯಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಎಲ್ಲಾ ಇಲಾಖೆಗಳು, ಜನಪ್ರತಿನಿಧಿಗಳು ಮತ್ತು ಸಮುದಾಯದ ಜವಾಬ್ದಾರಿಯಾಗಿದೆ. ಮಕ್ಕಳ ರಕ್ಷಣೆಗೆ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೂಪಿಸಿರುವ ಹಲವು ಯೋಜನೆಗಳ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯವಾಗಿರುತ್ತದೆ. ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ಸಮಗ್ರ ಅಭಿವೃದ್ಧಿಯ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ‘ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ’ ಪಂಚಾಯತಿಗಳನ್ನಾಗಿಸಲು ಉಲ್ಲೇಖ(3)ರ ಸುತ್ತೋಲೆಯ ಮೂಲಕ 2020ರಿಂದ ಪ್ರತಿ ವರ್ಷವೂ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ’ವನ್ನು ಆಯೋಜಿಸಿ, ಈ ಅವಧಿಯಲ್ಲಿ ಒಂದು ದಿನ ಮಕ್ಕಳ ಗ್ರಾಮ ಸಭೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ಮುಂದುವರೆದು, ಉಲ್ಲೇಖಿತ (3)ರಿಂದ(6)ರ ಸುತ್ತೋಲೆಗಳಲ್ಲಿ ವಿವರವಾದ ಮಾರ್ಗಸೂಚಿ ನೀಡಲಾಗಿರುತ್ತದೆ. 2024-25ನೇ ಸಾಲಿನಲ್ಲಿ 14 ನವಂಬರ್ 2024ರಿಂದ 24 ಜನವರಿ 2025 ರವರೆಗೆ, 10 ವಾರಗಳ ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ” ಮತ್ತು ಗ್ರಾಮ ಪಂಚಾಯತಿಗಳಲ್ಲಿ ಒಂದು ದಿನ “ಮಕ್ಕಳ ವಿಶೇಷ ಗ್ರಾಮ ಸಭೆ”ಯನ್ನು ಈ ಕೆಳಗೆ ವಿವರಿಸಿರುವಂತೆ ನಡೆಸಲು ನಿರ್ಣಯಿಸಲಾಗಿದೆ.
1. ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಮತ್ತು ಮಕ್ಕಳ ಗ್ರಾಮ ಸಭೆಯ ಪೂರ್ವ ಸಿದ್ಧತೆ: ಗ್ರಾಮ ಪಂಚಾಯತಿಗಳಿಂದ ವಿವಿಧ ಭಾಗೀದಾರರ ಸಹಭಾಗಿತ್ವದಲ್ಲಿ ಪೂರ್ವ ಸಿದ್ಧತೆಗಾಗಿ ಸಭೆಯನ್ನು ನಡೆಸಿ ಮಕ್ಕಳ ಸ್ನೇಹಿ ಅಭಿಯಾನದ ಕಾರ್ಯಚಟುವಟಿಕೆಗಳ ವೇಳಾ ಪಟ್ಟಿ ಮತ್ತು ಸಾಧಿಸಬೇಕಾದ ಗುರಿಗಳ ಕುರಿತು ಕಾರ್ಯಯೋಜನೆ ತಯಾರಿಸಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.
ಪೂರ್ವ ತಯಾರಿ:
> 2023-2024 ಮಕ್ಕಳ ಗ್ರಾಮ ಸಭೆಯ ನಡಾವಳಿಗಳನ್ನು ಪರಾಮರ್ಶಿಸಿ, ಸದರಿ ಸಭೆಯಲ್ಲಿನ ನಿರ್ಣಯಗಳ ಜಾರಿಗಾಗಿ ತೆಗೆದುಕೊಂಡ ಕ್ರಮಗಳ ಅನುಪಾಲನಾ ವರದಿಯನ್ನು ಸಿದ್ಧಪಡಿಸಿ, ಸ್ಥಳೀಯ ಸ್ವ ಸಹಾಯ ಸಂಘಗಳು ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳೊಂದಿಗೆ ಮುಂಚಿತವಾಗಿ ಹಂಚಿಕೊಂಡು ಅವರುಗಳ ಪ್ರತಿಕ್ರಿಯೆ ಮತ್ತು ಶಿಫಾರಸ್ಸುಗಳನ್ನು ಪಡೆದು ಅಂತಿಮಗೊಳಿಸುವುದು. ಸದರಿ ವರದಿಯನ್ನು 2024-25 ರ ಸಾಲಿನ ಮಕ್ಕಳ ಗ್ರಾಮ ಸಭೆಯಲ್ಲಿ ಪ್ರಸ್ತುತ ಪಡಿಸುವುದು.
> ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಕ್ಕಳ ಗ್ರಾಮ ಸಭೆ ನಡೆಸಲು ದಿನಾಂಕವನ್ನು ನಿಗದಿಗೊಳಿಸುವುದು.
ಪೂರ್ವ ಸಿದ್ಧತಾ ಸಭೆ: ‘ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ” ನಡೆಸುವ ಕುರಿತು ಪೂರ್ವಸಿದ್ಧತೆಗಾಗಿ ಗ್ರಾಮ ಪಂಚಾಯತಿ ಮಟ್ಟದ ಮಕ್ಕಳಿಗೆ ಸಂಬಂಧಿಸಿದ ಸಮಿತಿಗಳಾದ ಗ್ರಾಮ ಪಂಚಾಯತಿ ಶಿಕ್ಷಣ ಕಾರ್ಯಪಡೆ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಬಾಲ ವಿಕಾಸ ಸಮಿತಿ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ, ಗ್ರಾಮ ಪಂಚಾಯತಿ ಗ್ರಂಥಾಲಯ ಸಲಹಾ ಸಮಿತಿ, ಗ್ರಾಮ ಆರೋಗ್ಯ ಪೌಷ್ಟಿಕತೆ ಮತ್ತು ನೈರ್ಮಲ್ಯ ಸಮಿತಿಗಳು ಸೇರಿದಂತೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 (ತಿದ್ದುಪಡಿ 2015)ರ ಪ್ರಕರಣ 61-Aರ ಅಡಿಯಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚಿಸಲಾದ ವಿವಿಧ ಸಮಿತಿಯ ಪ್ರತಿನಿಧಿಗಳ ಮತ್ತು ವಿವಿಧ ಇಲಾಖೆ/ಇಲಾಖೇತರ ಭಾಗೀದಾರರ ಸಭೆಯನ್ನು ಅನುಬಂಧ-ಎರಲ್ಲಿ ತಿಳಿಸಿರುವಂತೆ ನಡೆಸುವುದು. ಈ ಸಭೆಯಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ನೀಡಿ 14 ನವೆಂಬರ್ 2024 ರಿಂದ 24 ಜನವರಿ 2025ರವೆಗೆ ಗ್ರಾಮ ಪಂಚಾಯತಿಯಿಂದ “ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ“ಆಯೋಜಿಸುವ ಕುರಿತು ಚರ್ಚಿಸಿ 10 ವಾರಗಳಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು, ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಧಿಸಬೇಕಾದ ಗುರಿಗಳ ಕುರಿತು ತಾತ್ಕಾಲಿಕ ದಿನಾಂಕಗಳೊಂದಿಗೆ ವಿವರವಾದ ವೇಳಾ ಪಟ್ಟಿಯನ್ನು ಸಿದ್ದ ಪಡಿಸಿಕೊಳ್ಳುವುದು ಹಾಗೂ ರೂಪಿಸಲಾದ ಕಾರ್ಯಕ್ರಮ/ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸುವುದು. (ಅನುಬಂಧ-ಎ ಮಾದರಿ ವೇಳಾಪಟ್ಟಿ ಮತ್ತು ಅನುಬಂಧ-ಬಿ ಸಾಧಿಸಬೇಕಾದ ಗುರಿಗಳನ್ನು ನಮೂದಿಸಲಾಗಿದೆ).
ಬಾಲ ಮಿತ್ರ: ಉಲ್ಲೇಖಿತ (6)ರ ಸುತ್ತೋಲೆಯಲ್ಲಿ ತಿಳಿಸಿರುವಂತೆ ಪೂರ್ವ ಸಿದ್ಧತೆ ಸಭೆಯಲ್ಲಿ ಗ್ರಾಮ ಪಂಚಾಯತಿ ಶಿಕ್ಷಣ ಕಾರ್ಯಪಡೆಯಲ್ಲಿ ಇರುವ ಒಬ್ಬ ಸದಸ್ಯರನ್ನು ‘ಪಂಚಾಯತಿ ಬಾಲ ಮಿತ್ರ’ ಎಂದು ಘೋಷಿಸುವುದು ಮತ್ತು ಸದರಿ ಸುತ್ತೋಲೆಯಲ್ಲಿ ತಿಳಿಸಿರುವಂತೆ ಕಾರ್ಯಗಳನ್ನು ನಿರ್ವಹಿಸುವುದು.
ಮಕ್ಕಳ ಸ್ಥಿತಿ: ಪ್ರತಿ ವಾರ್ಡ್ ಮಟ್ಟದ ಮತ್ತು ಗ್ರಾಮ ಪಂಚಾಯತಿ ಮಟ್ಟದ ಮಕ್ಕಳ
ಪರಿಸ್ಥಿತಿಯನ್ನು ( 2023-2024 ನೇ ಸಾಲಿನ, ಮಾರ್ಚ್ 2024 ಅಂತ್ಯದವರೆಗೆ ಇರುವಂತೆ) ವಿವರಿಸಿರುವ ಅಂಕಿಸಂಖ್ಯೆಯ ಚಾರ್ಟ್ / ಪಟ್ಟಿಯನ್ನು ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರ ಸಮನ್ವಯತೆಯಲ್ಲಿ ಸಿದ್ಧಪಡಿಸಿ ಅದನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಫೇಸ್‌ಬುಕ್‌ನಲ್ಲಿ ಹಾಕಬೇಕು. ಅದರ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಹಾಗೂ ಕೇಳಿದವರಿಗೆ ಕೊಡುವ ಸಲುವಾಗಿ ಪ್ರತಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಈ ಪಟ್ಟಿಯನ್ನು 20 ನವೆಂಬರ್ 2024 ರೊಳಗೆ ಸಿದ್ಧಪಡಿಸಬೇಕು. ಈ ಪಟ್ಟಿ ಆಧರಿಸಿ ಮಕ್ಕಳ ಗ್ರಾಮಸಭೆಯಲ್ಲಿ ಚರ್ಚೆ ನಡೆಸಲು ಸಂಬಂಧಿತರೆಲ್ಲರೂ ಸಿದ್ಧರಿರಬೇಕು (ಅನುಬಂಧ-ಸಿ ಯಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿಗಳು-ಮಕ್ಕಳ ಗ್ರಾಮ ಸಭೆಯ ಮಾದರಿ ಅಂಕಿಸಂಖ್ಯೆಯ ಚಾರ್ಟ್ ನೀಡಲಾಗಿದೆ].
“ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ’ದ ಕುರಿತು ರಾಜ್ಯ ಮಟ್ಟದಿಂದ ಯುಟ್ಯೂಬ್ ಲೈವ್/ನೇರ ಪ್ರಸಾರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. (ತರಬೇತಿ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು) ಈ ಕಾರ್ಯಕ್ರಮದಲ್ಲಿ ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಬೇಕು. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ 02 ಮಕ್ಕಳು ಭಾಗವಹಿಸಲು ಕ್ರಮ ಕೈಗೊಳ್ಳುವುದು ಹಾಗೂ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೂ ಸಹ ಈ ತರಬೇತಿಯಲ್ಲಿ ಭಾಗವಹಿಸಲು ತಿಳಿಸುವುದು.