ಬೆಂಗಳೂರು : ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಯಾದ ಸರ್ಕಾರಿ ನೌಕರನಿಗೆ ಹೊಸ ಹುದ್ದೆಗೆ ಹಾಜರಾಗಲು ಸೇರಿಕೆ ಕಾಲ ಸಿಗುತ್ತದೆ. ವಿಶೇಷ ಕರ್ತವ್ಯಕ್ಕಾಗಿ ಸ್ವಲ್ಪ ಕಾಲದವರೆಗೆ ಮಾತ್ರ ಬೇರೆಡೆ ಕಳುಹಿಸಿದರೆ ಕೇವಲ ವಾಸ್ತವಿಕ ಪ್ರಯಾಣ ಸಮಯವನ್ನು ಅನುಮತಿಸಬಹುದು.
ಕೋರಿಕೆ ಮೇರೆಗೆ ವರ್ಗಾವಣೆಯಾದಾಗ ಸೇರುವ ಕಾಲ ದೊರೆಯುವುದಿಲ್ಲ. ಪ್ರಯಾಣದ ದಿನಗಳನ್ನು ಬಳಸಲು ಬರುವುದಿಲ್ಲ. ಈ ದಿನಗಳಿಗಾಗಿ ರಜೆಯನ್ನು ಮಂಜೂರು ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ನಿಯಮ 85 ರಲ್ಲಿ ಹೇಳಿದಂತೆ ಚಾರ್ಜ್ ವಹಿಸಿಕೊಳ್ಳಲು ತಗಲುವ ದಿನಗಳನ್ನು ಮಾತ್ರ ಉಪಯೋಗಿಸಿಕೊಳ್ಳಬಹುದು.
ಕೇಂದ್ರ ಸರ್ಕಾರ / ಇತರ ರಾಜ್ಯ ಸರ್ಕಾರ / ಇತರ ಸಂಸ್ಥೆಗೆ ನಿಯೋಜನೆ ಮೇಲೆ ಹೋದ ರಾಜ್ಯ ಸರ್ಕಾರಿ ನೌಕರರಿಗೆ ಅವುಗಳು ರಚಿಸಿದ ನಿಯಮಗಳ ಪ್ರಕಾರ ಸೇರುವ ಕಾಲ ಸಿಗುತ್ತದೆ. ಆದರೆ ಒಪ್ಪಂದದಲ್ಲಿ ಬೇರೆ ನಿಯಮಗಳನ್ನು ಅನ್ವಯವಾಗುವಂತೆ ಕರಾರುಗಳಿದ್ದರೆ ಅದರ ಪ್ರಕಾರ ಸೇರುವ ಕಾಲ ಸಿಗುತ್ತದೆ.
ಕೇಂದ್ರ ಸರ್ಕಾರ / ಇತರ ರಾಜ್ಯ ಸರ್ಕಾರ ಇತರ ಸಂಸ್ಥೆಗಳಿಂದ ನಮ್ಮ ರಾಜ್ಯಕ್ಕೆ ನಿಯೋಜನೆ ಮೇಲೆ ಬಂದರೆ ಅವರಿಗೆ ಕ.ನಾ.ಸೇ.ನಿಯಮಾವಳಿಗಳು ಅನ್ವಯವಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸಂದರ್ಶನದ ಸಲುವಾಗಿ ನೇಮಕಗೊಂಡ ಹುದ್ದೆಗೆ ಹಾಜರಾಗಲು ಸೇರುವ ಕಾಲ ಸಿಗುತ್ತದೆ.
ರಾಜ್ಯದ ಒಳಗಡೆ ಅಥವಾ ಹೊರಗೆ ತರಬೇತಿಗಾಗಿ ನಿಯುಕ್ತಿಯಾದ ಅವಧಿ ಮತ್ತು ವಾಸ್ತವಿಕ ಪ್ರವಾಸದ ಅವಧಿಯನ್ನು ಸೇವಾ ಅವಧಿಯೆಂದು ಪರಿಗಣಿಸುವುದರಿಂದ ಸೇರುವ ಕಾಲ ಸಿಗುವುದಿಲ್ಲ. ಆದರೆ ತರಬೇತಿ ಮುಕ್ತಾಯವಾದ ನಂತರ ಬೇರೆ ಸ್ಥಳಕ್ಕೆ ವರ್ಗಾವಣೆಯಾದರೆ ಸೇರುವ ಕಾಲ ಸಿಗುತ್ತದೆ.
ನಿಲಂಬನೆಗೊಂಡ ಸರ್ಕಾರಿ ನೌಕರನಿಗೆ ಪುನರ್ ನೇಮಕ ಆಜ್ಞೆ ದೊರೆತ ಮರು ದಿನದಿಂದ ಬೇರೆ ಸ್ಥಳಕ್ಕೆ ಹಾಜರಾಗಲು ಮಾತ್ರ ಸೇರುವ ಕಾಲ ಸಿಗುತ್ತದೆ. ಮೊದಲಿದ್ದ ಸ್ಥಳದಲ್ಲಿಯೇ ಮುಂದುವರಿಸಲ್ಪಟ್ಟರೆ ಸೇರಿಕೆ ಕಾಲ ಸಿರುವುದಿಲ್ಲ.
ಸೇರಿಕೆ ಕಾಲದಲ್ಲಿದ್ದಾಗ ವರ್ಗಾವಣೆಯಲ್ಲಿ ಬದಲಾವಣೆ :
ಸೇರಿಕೆ ಕಾಲದಲ್ಲಿರುವಾಗ ಎರಡನೇ ವರ್ಗಾವಣಾ ಆಜ್ಞೆ ಮತ್ತೊಂದು ಸ್ಥಳಕ್ಕೆ ಆದರೆ ಉಪಯೋಗಿಸಿದ ಸೇರಿಕೆ ಕಾಲವು ಸೇರಿ ವರ್ಗಾವಣೆ ಆಜ್ಞೆ ದೊರೆತ ಮರುದಿನದಿಂದ ನಿಯಮ 78 ರಂತೆ ಪುನಃ ಸೇರಿಕೆ ಕಾಲ ಸಿಗುತ್ತದೆ. ಎರಡನೇ ಸೇರಿಕೆ ಕಾಲಕ್ಕೆ ಆಜ್ಞೆ ಕೈ ಸೇರುವ ಸ್ಥಳದಿಂದಲೆ ವರ್ಗಾವಣೆಯಾಗಿದೆ ಎಂದು ಲೆಕ್ಕ ಹಾಕಬೇಕು.
ನಿಯಮ 80 ಮತ್ತು 81 : ತರಬೇತಿ ಅಥವಾ ಶಿಕ್ಷಣದ ನಂತರ ವಾಪಸಾತಿ :
1. ಹೊರ ದೇಶಗಳಲ್ಲಿ ಉನ್ನತ ಶಿಕ್ಷಣ ಅಥವಾ ತರಬೇತಿ ಮುಗಿದ ನಂತರ ತಮ್ಮ ಸೇವಾ ಸ್ಥಳಕ್ಕೆ ಹಾಜರಾಗಲು ಗರಿಷ್ಠ 7 ದಿನಗಳು ಸೇರುವ ಕಾಲ ಲಭ್ಯವಿರುತ್ತದೆ.
2. ಹೊರ ದೇಶಗಳಲ್ಲಿ ನಿಯೋಜನೆ ಮೇಲೆ ಇದ್ದವರಿಗೂ ಗರಿಷ್ಠ 7 ದಿನಗಳ ಕಾಲ ಸೇರಿಕೆ ಕಾಲ ಲಭ್ಯವಿರುತ್ತದೆ.
ನಿಯಮ 82 : ಸೇರಿಕೆ ಕಾಲದೊಂದಿಗೆ ಸಾರ್ವತ್ರಿಕ ರಜೆ ಸೇರ್ಪಡೆ :
ಸಾರ್ವತ್ರಿಕ ರಜಾ ದಿನಗಳನ್ನು ಸೇರುವ ಕಾಲದ ಮಧ್ಯದಲ್ಲಿ ಬಳಸಲು ಬರುವುದಿಲ್ಲ. ಈ ರಜಾ ದಿನಗಳು ಸೇರುವ ಕಾಲವೆಂದು ಪರಿಗಣಿಸಲ್ಪಡುತ್ತದೆ. ಆದರೆ ಸೇರುವ ಕಾಲದ ನಂತರ’ ಬಂದ ಸಾರ್ವತ್ರಿಕ ರಜಾ ದಿನಗಳನ್ನು ಬಳಸಬಹುದು. ಸಾಂದರ್ಭಿಕ ರಜೆಯನ್ನು ಸೇರುವ ಕಾಲದೊಂದಿಗೆ ತೆಗೆದುಕೊಳ್ಳಲು ಬರುವುದಿಲ್ಲ. ವರ್ಗಾವಣೆ ಆದಾಗ ಬೇರೆ ವಿದದ ರಜೆಯನ್ನು ಕೇವಲ ವೈದ್ಯಕೀಯ ಮಂಡಳಿ ನೀಡಿದ ದೃಢೀಕರಣ ಪತ್ರದ ಮೇಲೆ ಮಾತ್ರ ಮಂಜೂರು ಮಾಡಬಹುದು. ರಜೆಯ ಅವಧಿ ಎಷ್ಟೇ ಇದ್ದರೂ ವೈದ್ಯಕೀಯ ಮಂಡಳಿ ನೀಡಿದ ದೃಢೀಕರಣ ಪತ್ರ ಬೇಕು.
ನಿಯಮ 83 : ಸೇರಿಕೆ ಕಾಲದ ಜೊತೆಗೆ ಬಿಡುವನ್ನು ಸಂಯೋಜಿಸಬಹುದು.
ನಿಯಮ 84 :
ಸೇರಿಕೆ ಕಾಲದಲ್ಲಿ ಕಡಿತ : ಆಡಳಿತ ಹಿತದೃಷ್ಟಿಯಿಂದ ಮತ್ತು ಅವಶ್ಯ ಕಾರ್ಯ ನಿಮಿತ್ತವಾಗಿ ಸೇರಿಕೆ ಕಾಲದಲ್ಲಿ ಕಡಿತಗೊಳಿಸಬಹುದು. ಕೇವಲ ವಾಸ್ತವಿಕ ಪ್ರಯಾಣ ಕಾಲಕ್ಕೆ ಸೀಮಿತಗೊಳಿಸಬಹುದು.
ನಿಯಮ 85 : ಪ್ರಭಾರ ವಹಿಸಿಕೊಳ್ಳಲು ಅಧಿಕ ಸೇರುವ ಕಾಲ :
ಈ ನಿಯಮದ ಅಡಿ ಕೊಟ್ಟಿರುವ ಪ್ರಕಾರ ಪದ ಮುಕ್ತ ಅಧಿಕಾರಿಗೆ (Relieving officer) ಮಾತ್ರ ಅಧಿಕ ಸೇರಿಕೆ ಕಾಲ ಸಿಗುತ್ತದೆ.
ನಿಯಮ 86 : ಸೇರಿಕೆ ಕಾಲದ ಹೆಚ್ಚಳ :
ಅತೀವೃಷ್ಟಿ, ನೆರೆ ಹಾವಳಿ, ಅಪಘಾತ, ಮುಷ್ಕರ ಇಂತಹ ಕಾರಣಗಳಿಂದ ಇಲಾಖೆ ಮುಖ್ಯಸ್ಥರು ಗರಿಷ್ಠ 15 ದಿನಗಳವರೆಗೆ ವಿಸ್ತರಿಸಬಹುದು. ಇದಕ್ಕೂ ಹೆಚ್ಚಿಗೆ ವಿಸ್ತರಿಸಲು ಸರಕಾರದ ಮಂಜೂರಿರಬೇಕು.
ನಿಯಮ : 87 ಬಳಸದ ಸೇರಿಕೆ ಕಾಲ :
ಬಳಸದ ಸೇರಿಕೆ ಕಾಲವನ್ನು ಗಳಿಕೆ ರಜೆ ಖಾತೆಗೆ ಜಮೆ ಮಾಡಬೇಕು ಮತ್ತು ಅದನ್ನು ಗಳಿಕೆ ರಜೆ ಎಂದು ಪರಿಗಣಿಸಬೇಕು.
ನಿಯಮ 88 :
ಸೇರಿಕೆ ಕಾಲದ ನಂತರ ನಂತರವೂ ಸರ್ಕಾರಿ ನೌಕರನು ಹುದ್ದೆಗೆ ಹಾಜರಾಗದಿದ್ದಲ್ಲಿ ನಿಯಮ 106ಎ ಪ್ರಕಾರ ಅನಧಿಕೃತ ಗೈರುಹಾಜರಿ ಎಂದು ಪರಿಗಣಿಸತಕ್ಕದ್ದು ಹಾಗೂ ಆ ಅವಧಿಯ ದಿನಗಳನ್ನು ಅರ್ಧವೇತನ ರಜೆಯ ಲೆಕ್ಕದಿಂದ ಕಡಿಮೆ ಮಾಡತಕ್ಕದ್ದು.
ನಿಯಮ 89 : ಸೇರಿಕೆ ಕಾಲದ ಅವಧಿಗೆ ವೇತನ :
ಹಿಂದಿನ ಹುದ್ದೆಯಲ್ಲಿ ಅವನು ಪಡೆಯುತ್ತಿದ್ದ ವೇತನದ ದರದಲ್ಲಿ ಸೇರಿಕೆ ಕಾಲದ ಅವಧಿಗೆ ವೇತನ ಸಿಗುವುದು. ಆದರೆ ಸೇರಿಕೆ ಕಾಲದ ಅವಧಿಗೆ 1 ವಾಹನ ಭತ್ಯೆ, 2. ವಿಶೇಷ ಭತ್ಯೆ, 3. ಯೋಜನಾ ಭತ್ಯೆ, 4. ಖಾಯಂ ಪ್ರವಾಸ ಭತ್ಯೆ ಇವು ಸಿಗುವುದಿಲ್ಲ.