ರಾಜ್ಯ ಸರಕಾರಿ ನೌಕರರಿಗೆ ಆಪತ್ಕಾಲದಲ್ಲಿ ಆರ್ಥಿಕವಾಗಿ ಸಹಾಯವಾಗಲು ಮತ್ತು ಬ್ಯಾಂಕಿನ ವಿವಿಧ ಸೌಲಭ್ಯಗಳನ್ನು ಉಚಿತವಾಗಿ ಪಡೆಯಲು ಅನುಕೂಲವಾಗುವಂತೆ ಎಸ್.ಬಿ.ಐ, ಕೆನರಾ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕಗಳಲ್ಲಿ ರಾಜ್ಯ ಸರ್ಕಾರಿ ಸಂಬಳ ಪ್ಯಾಕೇಜ್ ಖಾತೆ ಹೊಂದಲು ಅವಕಾಶ ಮಾಡಿದ್ದು, ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಇಲಾಖೆಗಳ ಸರಕಾರಿ ನೌಕರರು ತಮಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಪ್ರಯೋಜನವಾಗುವ ಸಂಬಳ ಪ್ಯಾಕೇಜ್ ಖಾತೆ ಹೊಂದಬೇಕು. ಈ ಕುರಿತು ಆಯಾ ಇಲಾಖೆಯ ಜಿಲ್ಲಾ ಮುಖ್ಯಸ್ಥರು ಖಾತೆಯ ಕ್ರಮ ವಹಿಸಿ, ಏಪ್ರಿಲ್ ಅಂತ್ಯದೊಳಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ ಹಾಗೂ ಸರಕಾರಿ ನೌಕರರ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಬ್ಯಾಂಕರ್ಸ್ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ವಿಶೇಷ ಸಭೆ ಜರುಗಿಸಿ, ಮಾತನಾಡಿದರು.
ಸರಕಾರದಿಂದ ನೇರವಾಗಿ ಮತ್ತು ಪರೋಕ್ಷವಾಗಿ ನೇಮಕಗೊಂಡಿರುವ ಅಧಿಕಾರಿಗಳಿಗೆ, ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸರಕಾರಿ ನೌಕರ ತನ್ನ ಸಂಬಳ ಖಾತೆಯನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ ಮಾಡಿಸಿಕೊಂಡರೆ ಉಚಿತವಾಗಿ ಒಂದು ಕೋಟಿ ರೂ. ಮೊತ್ತದ ವಿಮೆ ಲಭ್ಯವಾಗುತ್ತದೆ. ಮತ್ತು ಎಟಿಎಂ, ಚೆಕ್ ಬುಕ್, ಎಸ್.ಎಮ್.ಎಸ್ ಸೇರಿದಂತೆ ವಿವಿಧ ಅಗತ್ಯ ಸೇವೆಗಳು ಉಚಿತವಾಗಿ ದೊರೆಯುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮುಖ್ಯವಾಗಿ ಈಗ ರಾಷ್ಟ್ರೀಕೃತ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಅವರು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಸಂಬಳ ಪ್ಯಾಕೇಜ್ ಖಾತೆ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲ ನೌಕರರಿಗೆ ಇದರ ಪ್ರಯೋಜನ ಲಭ್ಯವಾಗಬೇಕು. ಪ್ರತಿ ಇಲಾಖೆಯ ಡಿಡಿಓ (ಬಟವಡೆ) ಅಧಿಕಾರಿಗಳು ನೇರವಾಗಿ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಯನ್ನು ಸಂಪರ್ಕಿಸಿ, ಖಾತೆ ಹೊಂದಲು ಅಥವಾ ಸಂಬಳ ಪ್ಯಾಕೇಜ್ ಖಾತೆಯಾಗಿ ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರಿಕೃತ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಡಿಡಿಓ (ಬಟವಡೆ) ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಪ್ರಸ್ತುತ ಪಡೆಯುತ್ತಿರುವ ವೇತನ, ಜನ್ಮ ದಿನಾಂಕ ನಮೂದಿಸಿದ ವಿವರ ಇರುವ ಪಟ್ಟಿ ತಯಾರಿಸಿಕೊಂಡು ನಿಗದಿಪಡಿಸಿರುವ ಎಸ್.ಬಿ.ಐ, ಕೆನರಾ ಹಾಗೂ ಬ್ಯಾಂಕ್ ಆಫ್ ಬರೋಡಾದ ಹುಬ್ಬಳ್ಳಿ ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡಿ, ಸಲ್ಲಿಸಬಹುದು ಅಥವಾ ಇ-ಮೇಲ್ ಮೂಲಕ ಕಳುಹಿಸಬಹುದು. ಬ್ಯಾಂಕ್ ಅಧಿಕಾರಿಗಳು ನೌಕರನ ಖಾತೆ ಪರಿಶೀಲಿಸಿ, ಅದು ಸಂಬಳ ಪ್ಯಾಕೇಜ್ ಖಾತೆ ಆಗಿರದಿದ್ದಲ್ಲಿ, ಅಗತ್ಯ ದಾಖಲೆಗಳನ್ನು ಪಡೆದು ಪುನರ್ ನವೀಕರಿಸಿ ಎಸ್.ಜಿ.ಎಸ್.ಪಿ ಖಾತೆಯಾಗಿ ಬದಲಾಯಿಸಿ ಕೊಡುತ್ತಾರೆ ಎಂದು ಅವರು ತಿಳಿಸಿದರು.
ಇಂದು ಸರಕಾರಿ ನೌಕರರು ಹೆಚ್ಚು ಕೆಲಸದ ಒತ್ತಡದಲ್ಲಿ ಇದ್ದಾರೆ. ಇದಕ್ಕೆ ಹಲವಾರು ಕಾರಣಗಳಿದ್ದು, ಇದರ ಮದ್ಯೆಯು ನಾವು ನಮ್ಮ ಹಾಗೂ ನಮ್ಮ ಕುಟುಂಬದ ಯೋಗಕ್ಷೇಮ, ಆರ್ಥಿಕತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕಿದೆ. ಭಾರತ ಸರಕಾರವು ಜಾರಿಗೊಳಿಸಿರುವ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಪ್ರತಿ ವರ್ಷಕ್ಕೆ ಕೇವಲ 20 ರೂಪಾಯಿಗಳನ್ನು ವಿಮೆ ತುಂಬಿದರೆ ವೈಯಕ್ತಿಕ ಅಪಘಾತ, ಅಂಗವಿಕಲತೆ ರೂ. 2 ಲಕ್ಷದವರೆಗೆ ಪರಿಹಾರ ಸಿಗುತ್ತದೆ. ಅಲ್ಲದೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗೆ ಪ್ರತಿ ವರ್ಷ 436 ರೂ.ಗಳನ್ನು ತುಂಬಿದರೆ ರೂ.2 ಲಕ್ಷದವರೆಗೆ ಜೀವ ವಿಮಾ ರಕ್ಷಣೆ ದೊರೆಯುತ್ತದೆ. ಈ ಎರಡು ವಿಮಾ ಯೋಜನೆಗೆ ಪ್ರತಿ ವರ್ಷದ ಮೇ 31 ರೊಳಗೆ ಕೇವಲ 456 ರೂ.ಗಳನ್ನು ತುಂಬಿದರೆ ಆಕಸ್ಮಿಕ ಅಪಘಾತ, ಅಂಗವಿಕಲತೆ ಅಥವಾ ಸಾವು ಸಂಭವಿಸಿದಾಗ ರೂ. 4 ಲಕ್ಷದವರೆಗೆ ಪರಿಹಾರ ಸಿಗುತ್ತದೆ. ಆದ್ದರಿಂದ ಕಡ್ಡಾಯವಾಗಿ ಎಲ್ಲ ನೌಕರರು ಸಂಬಳ ಪ್ಯಾಕೇಜ್ ಖಾತೆ ಹೊಂದಬೇಕು ಮತ್ತು ಪಿ.ಎಂ.ಎಸ್.ಬಿ.ವೈ ಹಾಗೂ ಪಿ.ಎಂ.ಜೆ.ಜೆ.ಬಿ.ವೈ ವಿಮಾ ಯೋಜನೆಗಳಿಗೆ ನೋಂದಾಯಿತರಾಗಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ಎ ದಿಂದ ಡಿ ಗ್ರೂಪ್‍ವರೆಗೆ ಸುಮಾರು 22 ಸಾವಿರ ಸರಕಾರಿ ನೌಕರರಿದ್ದಾರೆ. ಸರ್ಕಾರಿ ನೌಕರರಿಗೆ ಅಗತ್ಯ ಸಾಮಾಜಿಕ ಭದ್ರತೆ, ಸಂರಕ್ಷಣೆ ಹಾಗೂ ಅಗತ್ಯ ಸೌಕರ್ಯಗಳನ್ನು ಸರ್ಕಾರದಿಂದ ಪೂರೈಸಲಾಗುತ್ತಿದೆ. ಸರ್ಕಾರದ ಪ್ರತಿ ಯೋಜನೆ, ಕಲ್ಯಾಣ ಕಾರ್ಯಕ್ರಮಗಳನ್ನು ನಾವು ಅರ್ಹರಿಗೆ ತಲುಪಿಸಬೇಕು. ಜನಸ್ನೇಹಿ ಆಡಳಿತದೊಂದಿಗೆ ನಮ್ಮದು ನೌಕರ ಸ್ನೇಹಿ ಜಿಲ್ಲಾಡಳಿತವಾಗಿದೆ. ನೌಕರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸಲಾಗುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್. ಎಂ. ಅವರು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಕುರಿತು ಸಭೆಯಲ್ಲಿ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿದರು.
ಜಿಲ್ಲಾ ನಾಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಸಂಬಳ ಪ್ಯಾಕೇಜ್ ಖಾತೆ ಪ್ರಯೋಜನ, ಸೌಲಭ್ಯಗಳ ಕುರಿತು. ಎಸ್.ಬಿ.ಐ ಬ್ಯಾಂಕ್‍ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಎಸ್.ಭಟ್ಟ, ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಚಿನ್ನಾರಾವ್ ಮತ್ತು ಕೆನರಾ ಬ್ಯಾಂಕ್‍ದ ಅಧಿಕಾರಿ ಶಿವಾನಂದ ಎ. ಅವರು ಸಭೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಸಂಬಳ ಪ್ಯಾಕೇಜ್ ಖಾತೆ ಯೋಜನೆಯನ್ನು ವಿವರಿಸಿದರು.
ಸಭೆಯಲ್ಲಿ ಕೃಷಿ, ಕಂದಾಯ, ಆರೋಗ್ಯ, ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ ರಾಜ್, ಲೋಕೋಪಯೋಗಿ ಸೇರಿದಂತೆ ಸುಮಾರು 73 ಇಲಾಖೆ, ನಿಗಮ, ಮಂಡಳಿಗಳ ಅಧಿಕಾರಿಗಳು ಭಾಗವಹಿಸಿದ್ದರು.
ಯೋಜನೆ ಮಾಹಿತಿ: ಇತ್ತೀಚೆಗೆ, ಅನೇಕ ಬ್ಯಾಂಕುಗಳು ಸರ್ಕಾರಿ ಅಧಿಕಾರಿಗಳು, ನೌಕರರು ತಮ್ಮ ಉಳಿತಾಯ ಬ್ಯಾಂಕ್ ಖಾತೆಗಳನ್ನು ತೆರೆಯಲು ಆಕರ್ಷಕ ಸಂಬಳ ಪ್ಯಾಕೇಜ್‍ಗಳನ್ನು ನೀಡುತ್ತಿವೆ, ಇದರಲ್ಲಿ ಅಧಿಕಾರಿಗಳು, ನೌಕರರಿಗೆ ವಿವಿಧ ರಿಯಾಯಿತಿಗಳು ಮತ್ತು ಅಧಿಕಾರಿ, ನೌಕರರ ಕುಟುಂಬಗಳಿಗೆ ಹೆಚ್ಚುವರಿ ಪ್ರಯೋಜನಗಳು ಸೇರಿವೆ.
ಈ ಸಂಬಳ ಪ್ಯಾಕೇಜ್‍ಗಳಲ್ಲಿ ಬ್ಯಾಂಕುಗಳ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವನ್ನು ಕಡ್ಡಾಯಗೊಳಿಸದೇ ಇರುವುದು, 2 ಅಥವಾ 3 ತಿಂಗಳ ನಿವ್ವಳ ವೇತನವನ್ನು ಓವರ್‍ಡ್ರಾಫ್ಟ್ (ಮುಂಗಡ) ಆಗಿ ನೀಡುವುದು, ವಸತಿ ಸಾಲಗಳ ಮೇಲೆ ಕಡಿಮೆ ಬಡ್ಡಿದರವನ್ನು ವಿಸ್ತರಿಸುವುದು, ಉಚಿತ ನೆಫ್ಟ್, ಆರ್‍ಟಿಜಿಎಸ್ ವರ್ಗಾವಣೆಗಳು, ಉಚಿತ ಡಿಮ್ಯಾಂಡ್ ಡ್ರಾಫ್ಟ್‍ಗಳು, ಉಚಿತ ರುಪೇ ಡೆಬಿಟ್ ಕಾರ್ಡ್. ಕ್ರೆಡಿಟ್ ಕಾರ್ಡ್ ವಿಮೆ, ಬ್ಯಾಗೇಜ್ ವಿಮೆಗಳನ್ನು ನೀಡುವುದು, ಮತ್ತು ಲಾಕರ್ ಬಾಡಿಗೆಯಲ್ಲಿ ರಿಯಾಯಿತಿ ಇತ್ಯಾದಿಗಳನ್ನು ನೀಡಲಾಗುತ್ತದೆ. ಈ ಕೊಡುಗೆಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತವೆ. ಈ ಸೌಲಭ್ಯಗಳ ಜೊತೆಗೆ, ಅಧಿಕಾರಿ, ನೌಕರರ ನಿವ್ವಳ ಸಂಬಳವನ್ನು ಅವಲಂಬಿಸಿ ವಿವಿಧ ಯೋಜನೆಗಳ ಅಡಿಯಲ್ಲಿ ವೈಯಕ್ತಿಕ ಅಪಘಾತ ವಿಮೆ ವ್ಯಾಪ್ತಿಯನ್ನು ಯಾವುದೇ ಹೆಚ್ಚುವರಿ ಪ್ರೀಮಿಯಂ ವಿಧಿಸದೆ ನೀಡುತ್ತವೆ.
ಬ್ಯಾಂಕ್ ಸಂಬಳ ಪ್ಯಾಕೇಜ್‍ಗಳನ್ನು ನೀಡುತ್ತಿದ್ದರೂ ಸಹ, ಸಂಬಳ ಪ್ಯಾಕೇಜ್ ಗಳ ಪ್ರಯೋಜನಗಳನ್ನು ಪಡೆಯಲು, ಅಧಿಕಾರಿ, ನೌಕರರು ಬ್ಯಾಂಕಿಗೆ ನಿರ್ದಿಷ್ಟ ಮನವಿಯನ್ನು ಸಲ್ಲಿಸಬೇಕಾಗಿರುತ್ತದೆ. ಕೆಲವು ಅಧಿಕಾರಿ, ನೌಕರರು ಬ್ಯಾಂಕಿನಲ್ಲಿ ನೀಡಲಾಗುವ ಪ್ರಯೋಜನಗಳ ಬಗ್ಗೆ, ಅರಿವಿಲ್ಲದ ಹಾಗೂ ನಿರ್ಲಕ್ಷ್ಯದ ಕಾರಣದಿಂದ ಬ್ಯಾಂಕಿನಲ್ಲಿ ನೀಡುತ್ತಿರುವ ಸಂಬಳ ಪ್ಯಾಕೇಜ್‍ಗಳನ್ನು ಪಡೆಯುತ್ತಿಲ್ಲ.
ವಿಮಾ ಯೋಜನೆಗಳ ಜೊತೆಗೆ, ಅನೇಕ ಬ್ಯಾಂಕುಗಳು ಅತೀ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚುವರಿ ವೈಯಕ್ತಿಕ ಅಪಘಾತ ವಿಮಾ ಯೋಜನೆಗಳನ್ನು ಸಹ ನೀಡುತ್ತಿವೆ. ಇಂತಹ ಸೌಲಭ್ಯಗಳನ್ನು ಸಹ ಅಧಿಕಾರಿ, ನೌಕರರು ಪಡೆಯಬಹುದಾಗಿದೆ.
ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ವಿವಿಧ ಬ್ಯಾಂಕುಗಳು ಒದಗಿಸುವ ಸಂಬಳ ಪ್ಯಾಕೇಜ್‍ಗಳ ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ, ನೌಕರರಿಗೆ ರಾಜ್ಯ ಸರ್ಕಾರವು ಕಡ್ಡಾಯಗೊಳಿಸುವ ಬಗ್ಗೆ ಆದೇಶಿಸಿದೆ.
ಸ್ಯಾಲರಿ ಪ್ಯಾಕೇಜ್ ಅಕೌಂಟ್ ಮಾಹಿತಿ: ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರಿಗೆ ಬಹು ಉಪಯುಕ್ತವಾಗಿರುವ ಸ್ಯಾಲರಿ ಪ್ಯಾಕೇಜ್ ಅಕೌಂಟ್ ಹೊಂದಲು ಮತ್ತು ತಮ್ಮ ಸಂಬಳ ಖಾತೆಯನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ ಆಗಿ ಪರಿವರ್ತಿಸಲು ಅಗತ್ಯ ಮಾಹಿತಿ ಹಾಗೂ ಕ್ರಮಕ್ಕಾಗಿ ಹುಬ್ಬಳ್ಳಿಯ ಎಸ್.ಬಿ.ಐ ಬ್ಯಾಂಕ್‍ನ ಆಡಳಿತ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಎಸ್.ಭಟ್ಟ ಅವರನ್ನು ಸಂಪರ್ಕಿಸಬಹದು ಹಾಗೂ ತಮ್ಮ ವಿವರಗಳನ್ನು ಇ-ಮೇಲ್ agmcsptl.aohubban@sbi.co.in ಗೆ ಕಳುಹಿಸಬಹುದು ಮತ್ತು ಹುಬ್ಬಳ್ಳಿಯ ಕೆನರಾ ಬ್ಯಾಂಕ್‍ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕರಾದ ಶಿವಾನಂದ ಎ. ಅವರನ್ನು ಸಂಪರ್ಕಿಸಬಹದು ಹಾಗೂ ತಮ್ಮ ವಿವರಗಳನ್ನು ಇ-ಮೇಲ್ firohbi@canaraback.com ಗೆ ಕಳುಹಿಸಬಹುದು ಹಾಗೂ ಹುಬ್ಬಳ್ಳಿಯ ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿಯ ಅಧಿಕಾರಿ ಚಿನ್ನಾರಾವ್ ಅವರನ್ನು ಸಂಪರ್ಕಿಸಬಹದು ಹಾಗೂ ತಮ್ಮ ವಿವರಗಳನ್ನು ಇ-ಮೇಲ್ rbdm.hubli@bankofbaroda.com ಗೆ ಕಳುಹಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.