ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ ಸಚಿವರಗಳ ಜೊತೆಗೆ ಸಭೆ ನಡೆಸಿದರು. ಇದೀಗ ಇಂದಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಹಾಗೂ ಶಾಸಕರುಗಳ ಜೊತೆಗೆ ನಾಲ್ಕು ದಿನಗಳ ಕಾಲ ಸಭೆ ನಡೆಸಲಿದ್ದಾರೆ.
ಮೊದಲಿಗೆ, ತವರು ಜಿಲ್ಲೆ ಮೈಸೂರಿನಿಂದಲೇ ಇಂದು ಸಂಜೆ ಸಭೆ ಆರಂಭಿಸಲಿದ್ದಾರೆ. ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಗಳು ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಆ ಸಂಬಂಧ ಸಚಿವರು, ಶಾಸಕರ ಜತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. ಜಿಲ್ಲಾವಾರು ಸಭೆಗಳಲ್ಲಿ ಮುಖ್ಯಮಂತ್ರಿಗಳು ಪ್ರತಿ ಶಾಸಕರೊಂದಿಗೆ ವೈಯಕ್ತಿಕವಾಗಿ 10 ನಿಮಿಷಗಳಷ್ಟು ಹೊತ್ತು ಸಮಾಲೋಚನೆ ನಡೆಸಲಿದ್ದಾರೆ.
ಸಚಿವರು ಮತ್ತು ಶಾಸಕರ ಜತೆ ಸಭೆ ನಡೆಸುವ ವಿಚಾರವಾಗಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ. 2025-26ನೇ ಸಾಲಿನಲ್ಲಿ 8,000 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು 224 ವಿಧಾನಸಭಾ ಕ್ಷೇತ್ರಗಳಿಗೆ ವಿತರಿಸಲಾಗುವುದು. ಆಡಳಿತ ಪಕ್ಷದ ಶಾಸಕರಿಗೆ 50 ಕೋಟಿ ರೂಪಾಯಿ ಮತ್ತು ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.