ಬೆಳಗಾವಿ : ಬೆಳಗಾವಿಯ ಮರಾಠಾ ರೆಜಿಮೆಂಟ್ನಲ್ಲಿ ಇಂದು ನಡೆದ ಆರ್ಮಿ ಸೆಲೆಕ್ಷನ್ ಓಪನ್ ರ್ಯಾಲಿಯಲ್ಲಿ ನೂಕುನುಗ್ಗಲು ಉಂಟಾಯಿತು. ಇವಳೇ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಅರ್ಜಿ ಹಾಕಿದ್ದ ಅಭ್ಯರ್ಥಿಗಳ ಆಯ್ಕೆಗೆ ಇಂದು ಆಹ್ವಾನಿಸಲಾಗಿದ್ದು, ಓಪನ್ ರ್ಯಾಲಿಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಯುವಕರು ಭಾಗಿಯಾಗಿದ್ದರು.ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರದಿಂದಲೂ ಯುವಕರು ಆಗಮಿಸಿದ್ದು, ಬೆಳಿಗ್ಗೆಯಿಂದಲೂ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ನೂಕಾಟ ತಳ್ಳಾಟ ನಡೆದು, ಕೆಲ ಯುವಕರು ಬಿದ್ದು ಗಾಯಗೊಂಡಿದ್ದಾರೆ.
ಹುಬ್ಬಳ್ಳಿಯ ಅಲ್ಲಾಭಕ್ಷ ಯರಗಟ್ಟಿ ಹಾಗೂ ಗೊಕಾಕ್ ತಾಲೂಕಿನ ಬೆಟಗೇರಿ ಗ್ರಾಮದ ಪ್ರವೀಣ್ ಮಕಾಳೆ ಎಂಬುವವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾಗೂ ಸೈನಿಕರು ಯುವಕರಿಗೆ ಲಾಠಿ ರುಚಿ ತೋರಿಸಿದರು. ಲಾಠಿ ಬೀಸುತ್ತಿದ್ದಂತೆ ಯುವಕರು ಚೆಲ್ಲಾಪಿಲ್ಲಿಯಾಗಿ ಓಡಿದರು. ನಂತರ ಯುವಕರನ್ನು ಪೊಲೀಸರು, ಮಿಲಿಟರಿ ಸಿಬ್ಬಂದಿ ಸಾಲಾಗಿ ನಿಲ್ಲಿಸಿದರು.