ಬೆಂಗಳೂರು: ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ 2 ಮತ್ತು 3ರ ಸಮಯವನ್ನು ಬೆಳಿಗ್ಗೆ 11 ಗಂಟೆಗೆ ಆರಂಭಿಸುವುದಾಗಿ ಹೇಳಿದ್ದ ಶಾಲಾ ಶಿಕ್ಷಣ ಇಲಾಖೆ ಸಮಯವನ್ನು ಪರಿಷ್ಕರಿಸಿದ್ದು, ಬೆಳಗ್ಗೆ 10.30 ರಿಂದ ಪೂರ್ವ ಸಿದ್ಧತಾ ಪರೀಕ್ಷೆ ಆರಂಭಿಸುವಂತೆ ಸುತ್ತೋಲೆ ಹೊರಡಿಸಿದೆ.
ಬೆಳಗ್ಗೆ 11 ಗಂಟೆಗೆ ಪರೀಕ್ಷೆ ಆರಂಭಿಸುವುದರಿಂದ ಭೋಜನ ಸಮಯಕ್ಕೆ ತೊಡಕಾಗುತ್ತದೆ ಎನ್ನುವ ಕಾರಣಕ್ಕೆ ಸಮಯ ಪರಿಷ್ಕರಣೆ ಮಾಡಲಾಗಿದೆ. ಪರೀಕ್ಷೆಯ ದಿನದಂದು ವಿದ್ಯಾರ್ಥಿಗಳು 9 ಗಂಟೆಗೆ ತರಗತಿಗೆ ಹಾಜರಾಗಬೇಕು ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬೆಳಗ್ಗೆ 9:15ಕ್ಕೆ ಪ್ರಶ್ನೆ ಪತ್ರಿಕೆಯನ್ನು ಶಾಲಾ ಲಾಗಿನ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. 9:15 ರಿಂದ 10 20 ರವರೆಗೆ ಪ್ರಶ್ನೆ ಪತ್ರಿಕೆ ಮುದ್ರಣ ಮಾಡಿಕೊಳ್ಳಬೇಕು. ಬೆಳಿಗ್ಗೆ 10.30 ರಿಂದ ಪರೀಕ್ಷೆ ಆರಂಭಿಸಬೇಕು ಎಂದು ತಿಳಿಸಲಾಗಿದೆ.
ಏನಿದೆ ಶಿಕ್ಷಣ ಇಲಾಖೆ ಆದೇಶದಲ್ಲಿ?
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪೂರ್ವ ಸಿದ್ದತಾ ಪರೀಕ್ಷೆ-2 ಮತ್ತು 3 ನ್ನು ನಡೆಸಲು ಉಲ್ಲೇಖ(1) ರಲ್ಲಿನ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್. ಓ.ಪಿ) Standard Operating Procedure ಯಲ್ಲಿನ ಅಂಶಗಳನ್ನು ಅನುಷ್ಠಾನಗೊಳಿಸಲು ಸೂಚಿಸಲಾಗಿದೆ. ಸದರಿ ಸುತ್ತೋಲೆಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಯು ಬೆಳಗ್ಗೆ 11.00 ಗಂಟೆಯಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಲಾಗಿತ್ತು. ಉಲ್ಲೇಖ (4) ರಲ್ಲಿ ಪರೀಕ್ಷಾ ಸಮಯ ಕುರಿತು ತಿದ್ದುಪಡಿಗೆ ಕೋರಿಕೆಗಳನ್ನು ಪರಿಗಣಿಸಿ ಈ ಹಿಂದೆ ನಿಗಧಿಪಡಿಸಿದ್ದ ಸಮಯಕ್ಕೆ ಬದಲಾಗಿ ಸದರಿ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ಬೆಳಿಗ್ಗೆ 10.30 ರಿಂದ ಪ್ರಾರಂಭಿಸಲು ತಿಳಿಸಿದೆ. ಸದರಿ ಅಂಶದಂತೆ ಕ್ರಮವಹಿಸುವ ಕುರಿತು ಈ ಕೆಳಕಂಡ ಓದಲಾವಣೆಗಳನ್ನು ಮಾಡಲಾಗಿದೆ. ಉಳಿದಂತೆ ಉಲ್ಲೇಖ (1) ರ ದಿನಾಂಕ:17.01.2026 ರ ಸುತ್ತೋಲೆಯಲ್ಲಿರುವ ಅಂಶಗಳನ್ನು ಯಥಾವತ್ತಾಗಿ ಪಾಲಿಸುವುದು.









