ಬೆಂಗಳೂರು : ಕಳೆದ ಡಿಸೆಂಬರ್ 10 ರಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಬೆಂಗಳೂರಿನ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಮನೆಗೆ ನಟ ಯಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಹೌದು ಮಾಜಿ ಸಿಎಂ ಎಸ್ಎಂ ಕೃಷ್ಣ ಅವರು ನಿಧನರಾದ ದಿನದಂದು ನಟ ಯಶ್ ಅವರು ಮುಂಬೈ ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಇಂದು ಎಸ್ಎಂ ಕೃಷ್ಣ ಅವರ ಮನೆಗೆ ನಟ ಯಶ್ ಹಾಗೂ ಪತ್ನಿ ರಾಧಿಕಾ ಅವರು ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಎಸ್ ಎಂ ಕೃಷ್ಣ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಎಸ್ಎಂ ಕೃಷ್ಣ ಅವರದ್ದು ಧೀಮಂತ ವ್ಯಕ್ತಿತ್ವ. ಅವರು ನಿಧನರಾದಾಗ ನಾವು ಊರಲ್ಲಿ ಇರಲಿಲ್ಲ. ಹಾಗಾಗಿ ಈಗ ಖುದ್ದಾಗಿ ಬಂದಿದ್ದೇವೆ. ಅವರ ಆಶೀರ್ವಾದ ನನ್ನ ಮೇಲೆ ಯಾವಾಗಲೂ ಇತ್ತು. ನನ್ನ ಎಲ್ಲ ಬೆಳವಣಿಗೆಯಲ್ಲಿ ಅವರ ಹಾರೈಕೆ ಇತ್ತು. ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ನಟ ಯಶ್ ಅವರು ತಿಳಿಸಿದರು.
ಎಸ್ಎಂ ಕೃಷ್ಣ ಅವರು ಎಲ್ಲರಿಗೂ ಸದಾ ಒಳ್ಳೆಯದನ್ನೇ ಬಯಸುತ್ತಿದ್ದರು. ಬೆಳವಣಿಗೆಯನ್ನು ಅವರು ಯಾವಾಗಲೂ ಮೆಚ್ಚಿಕೊಳ್ಳುತ್ತಿದ್ದರು. ಅವರ ಮನಸ್ಥಿತಿಯೇ ಬೆಳವಣಿಗೆಯ ಕಡೆಗೆ ಇದ್ದಿದ್ದರಿಂದ ಯಾವಾಗಲೂ ನಮ್ಮ ಬೆಳವಣಿಗೆಯನ್ನು ನೋಡಿ ಹರಸುತ್ತಿದ್ದರು. ಈ ರಾಜ್ಯದಲ್ಲಿ ಎಸ್ಎಂ ಕೃಷ್ಣ ಅವರನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು. ಅವರ ಕೊಡುಗೆ ಅಪಾರ. ಇವತ್ತು ಬೆಂಗಳೂರು ಹಾಗೂ ಇಡೀ ರಾಜ್ಯದಲ್ಲಿ ಅವರು ಮಾಡಿರುವ ಕೆಲಸಗಳು ನಮ್ಮ ಕಣ್ಣ ಮುಂದೆ ಇವೆ. ಅವರು ಎಷ್ಟು ಅದ್ಭುತವಾದ ಬದುಕನ್ನು ಬದುಕಿದ್ದರು ಎಂಬುದು ಎಲ್ಲರಿಗೂ ಗೊತ್ತು ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ತಿಳಿಸಿದರು.