ಬೆಂಗಳೂರು : ಕಾಂತಾರಾ’ ಪಾತ್ರವನ್ನು ಅವಹೇಳನ ಮಾಡಿದ್ದ ಆರೋಪದ ಮೇಲೆ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ ಕೇಸ್ ದಾಖಲಾಗಿದೆ. ಈ ಎಫ್‌ಐಆರ್ ರದ್ದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ವೇಳೆ, ಬಾಲಿವುಡ್ ನಟ ಆದರೆ ಈಗಲೇ ಕೇಸ್ ವಿಚಾರಣೆ ಮಾಡಬೇಕಾ ಎಂದು ಹೈ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ರಣವೀರ್ ಸಿಂಗ್ ಪರ ವಕೀಲರು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. “ಪೊಲೀಸರು ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದ್ದಾರೆ, ಆದ್ದರಿಂದ ಇಂದೇ ವಿಚಾರಣೆ ನಡೆಸಿ” ಎಂದು ಕೋರಿದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಬಾಲಿವುಡ್ ನಟನಾದರೆ ಮಧ್ಯಾಹ್ನವೇ ವಿಚಾರಣೆ ನಡೆಸಬೇಕೇ? ಒಂದು ವೇಳೆ ಹಾಲಿವುಡ್ ನಟನಾದರೆ ಈಗಲೇ ವಿಚಾರಣೆ ನಡೆಸಬೇಕೆ?” ಎಂದು ಪ್ರಶ್ನಿಸುವ ಮೂಲಕ ವಿಶೇಷ ಆದ್ಯತೆ ನೀಡಲು ನಿರಾಕರಿಸಿದರು. ಅಂತಿಮವಾಗಿ ವಿಚಾರಣೆಯನ್ನು ನಾಳೆಗೆ ನಿಗದಿಪಡಿಸಿದರು.








