ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಮಹಿಳೆಯರಿಗೆ ಉಚಿತ ಬಸ್ ಸಂಚಾರದ ಶಕ್ತಿ ಯೋಜನೆಯಡಿ 400 ಕೋಟಿ ಫಲಾನುಭವಿಗಳು ಉಚಿತ ಸಂಚಾರ ಮಾಡಿದ್ದಾರೆ.
ಹೌದು, ಶಕ್ತಿ ಯೋಜನೆ ಆರಂಭವಾಗಿ 21 ತಿಂಗಳು ಪೂರ್ಣಗೊಂಡಿದ್ದು, ಫಲಾನುಭವಿಗಳ ಸಂಖ್ಯೆ 400 ಕೋಟಿಗೆ ತಲುಪಿದೆ. ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಳಿಸಿ ಫೆ.11ಕ್ಕೆ 21 ತಿಂಗಳು ಪೂರ್ಣಗೊಂಡಿದೆ. ಯೋಜನೆ ಜಾರಿ ನಂತರದಿಂದ ಪ್ರತಿದಿನ ಸರಾಸರಿ 60 ರಿಂದ 70 ಲಕ್ಷ ಮಹಿಳೆಯರು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ.
ಫೆ.24ಕ್ಕೆ ಒಟ್ಟಾರೆ ಫಲಾನುಭವಿಗಳ ಸಂಖ್ಯೆ 400 ಕೋಟಿಗೆ ಏರಿದೆ. ಯೋಜನೆ ಆರಂಭದಿಂದ ಫೆ.24ರವರೆಗೆ ಒಟ್ಟಾರೆ 681 ಕೋಟಿ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸಿದ್ದು, ಇದರಲ್ಲಿ ಶೇ.70ಕ್ಕೂ ಹೆಚ್ಚಿನವರು ಮಹಿಳಾ ಪ್ರಯಾಣಿಕರೇ ಆಗಿದಾರೆ. ಯೋಜನೆ ಅಡಿ ಈವರೆಗೆ 9,803 ಕೋಟಿ ರು. ಮೊತ್ತದ ಟಿಕೆಟ್ (ಶೂನ್ಯ ಮೌಲ್ಯ) ವಿತರಿಸಲಾಗಿದೆ.