ಬೆಂಗಳೂರು : POCSO ಕಾಯಿದೆಯಡಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ವಿಧಿಸಲಾಗುವ ಅಪರಾಧ ಮತ್ತು ದಂಡನೆಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಬಹಳಷ್ಟು ಬಾಲಕ ಬಾಲಕಿಯರು ಬಾಲ್ಯದಲ್ಲೇ ಲೈಂಗಿಕ ಕಿರುಕುಳ, ಲೈಂಗಿಕ ಶೋಷಣೆ, ಲೈಂಗಿಕ ದೌರ್ಜನ್ಯ ಅನುಭವಿಸಿರುತ್ತಾರೆ. ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಸಚಿವಾಲಯ 2006ರಲ್ಲಿ ನಡೆಸಿದ ಅಧ್ಯಯನದಲ್ಲಿ ‘ವಯಸ್ಕರಾಗಿರುವ ನಾಲ್ಕು ಜನರಲ್ಲಿ ಮೂವರು ತಮ್ಮ ಬಾಲ್ಯದಲ್ಲಿ ಶಿಶುಪೀಡಕರಿಂದ ಹಿಂಸೆಗೆ ಒಳಗಾಗಿರುತ್ತಾರೆ’ ಎಂದು ಉಲ್ಲೇಖಿಸಲಾಗಿದೆ. ಮಕ್ಕಳ ಮೇಲೆ ಉಂಟಾದ ಹಿಂಸೆಯು ದೈಹಿಕ, ಮಾನಸಿಕ, ಆರ್ಥಿಕ ಮತ್ತು ಲೈಂಗಿಕ ಶೋಷಣೆಗಳ ರೂಪದಲ್ಲಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸಲು ಕಠಿಣ ಕಾನೂನು ಸಿದ್ಧಪಡಿಸಿದರ ಪರಿಣಾಮವೇ, ‘ಮಕ್ಕಳ ಮೇಲಾಗುವ ಲೈಂಗಿಕ ಅಪರಾಧಗಳ ತಡೆ ಕಾಯ್ದೆ 2012’ (Protection Of Children from Sexual Offences Act 2012) ಪೋಕ್ಸೋ ಕಾಯಿದೆ ಎನ್ನಲಾಗುತ್ತದೆ.
POCSO ಕಾಯಿದೆಯ ವಿಶಿಷ್ಟತೆಗಳು :
ಮಕ್ಕಳೊಡನೆ ಎಲ್ಲ ವಯಸ್ಕರು ತಾಳ್ಮೆಯಿಂದ, ಸ್ನೇಹದಿಂದ ವರ್ತಿಸಬೇಕು.
ಪೊಲೀಸರು ಮಕ್ಕಳಿಂದ ಮಾಹಿತಿ ಸಂಗ್ರಹಿಸುವಾಗ ಯಾವುದೇ ರೀತಿಯ ಒತ್ತಡ ಹಾಕಬಾರದು.
ನ್ಯಾಯಾಲಯಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ಇರಬೇಕು.
ಮಕ್ಕಳು ಮತ್ತು ಮಕ್ಕಳಿಗೆ ಸಂಬಂಧಿಸಿದವರ ಮೇಲೆ ನಡೆಸಲಾಗುವ ವಿಚಾರಣೆಯನ್ನು ಗೌಪ್ಯವಾಗಿರಿಸಬೇಕು.
ಮಾಧ್ಯಮಗಳಲ್ಲಿ ಮಕ್ಕಳ ಹೆಸರು, ವಿವರಗಳನ್ನು ಬಹಿರಂಗಪಡಿಸಬಾರದು.
ಯಾವುದಾದರೂ ಬಾಲಕ ಅಥವಾ ಬಾಲಕಿ ದುರುಪಯೋಗಕ್ಕೆ ಒಳಗಾಗಿದ್ದರೆ, ಅಂತಹ ಮಕ್ಕಳಿಗೆ ಮಾನಸಿಕ ಧೈರ್ಯ ತುಂಬಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಈ ಕಾಯಿದೆ ಮತ್ತು ಅದರ ಜಾರಿ ಪ್ರಾಮುಖ್ಯತೆ ನೀಡಿದೆ.
POCSO ಕಾಯಿದೆಯಲ್ಲಿರುವ ಮಕ್ಕಳ ಸ್ನೇಹಿ ಅಂಶಗಳು :
ಸಾಮಾನ್ಯವಾಗಿ ಜನರಲ್ಲಿರುವ ತಪ್ಪು ಭಾವನೆ ಪೊಲೀಸ್ ಠಾಣೆಗೆ ಹೋಗಬಾರದು. ದೂರು ಕೊಡುವುದೆಂದರೆ ಬಹಳ ಕಷ್ಟ. ಪೊಲೀಸ್ ವಿಚಾರಣೆಗೆ ಒಳಪಡುವುದೆಂದರೆ ಯಾರಿಗೂ ಬೇಡದ ವಿಚಾರ.
ಅದರಲ್ಲೂ ಮಕ್ಕಳನ್ನು ಪೊಲೀಸ್ ಠಾಣೆಗೆ ದೂರು ಕೊಡಲೋ, ಇಲ್ಲವೇ ವಿಚಾರಣೆಗಳಿಗೆ ಕರೆದೊಯ್ಯುವುದೆಂದರೆ ಅದು ಅತ್ಯಂತ ಕಠಿಣವಾದುದು ಇತ್ಯಾದಿ.
ಆದರೆ ಈ ಕಾಯ್ದೆ ಮಕ್ಕಳ ಹಿತದೃಷ್ಟಿಗೆ ಪ್ರಾಮುಖ್ಯತೆ ನೀಡಿದೆ ಹಾಗೂ ಪ್ರತಿಹಂತದಲ್ಲೂ ಮಕ್ಕಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಗಮನ ನೀಡಿದೆ.
ಲೈಂಗಿಕ ಶೋಷಣೆಗೆ ಗುರಿಯಾದ ಮಕ್ಕಳು ಅವರಿಗೆ ಯಾವ ಸ್ಥಳ ಸುರಕ್ಷಿತವಾಗಿದೆ ಎಂದು ನಂಬುತ್ತಾರೋ ಅಂತಹ ಸ್ಥಳಕ್ಕೆ ಪೊಲೀಸರು ತಾವೇ ಹೋಗಿ ಮಾತನಾಡಿಸಬೇಕು.
ಮಕ್ಕಳ ಮನೆ ಅಥವಾ ಮಕ್ಕಳ ಸ್ನೇಹಿ ವಾತಾವರಣದಲ್ಲಿ ಮಕ್ಕಳ ಹೇಳಿಕೆಗಳನ್ನು ತೆಗೆದುಕೊಳ್ಳಬೇಕು.
ವಿಚಾರಣಾ ಸಂದರ್ಭದಲ್ಲಿ ಮಹಿಳಾ ಅಥವಾ ಪುರುಷ ಪೊಲೀಸ್ ಅಧಿಕಾರಿಗಳು (ಸಬ್‌ಇನ್ಸ್ಪೆಕ್ಟರ್ ಮತ್ತು ಮೇಲಿನ ಹಂತದವರು) ಪೊಲೀಸ್ ಸಮವಸ್ತ್ರದಲ್ಲಿರದೆ ಸಾಮಾನ್ಯರಂತೆ ಉಡುಪು ಧರಿಸಿರಬೇಕು. ತಮ್ಮ ಹೆಸರು ಮತ್ತು ಹುದ್ದೆ ಕುರಿತು ವಿವರ ಕೊಡಬೇಕು
ಮಕ್ಕಳಿಂದ ಹೇಳಿಕೆ ತೆಗೆದುಕೊಳ್ಳುವಾಗ ಮಕ್ಕಳು ಹೊರತುಪಡಿಸಿ ಯಾವುದೇ ಕಾರಣಕ್ಕೂ ಇತರರು ಇರಬಾರದು. ಆದರೆ ಮಗುವಿಗೆ ಬೆಂಬಲ ನೀಡುವ ವ್ಯಕ್ತಿಗಳು ಇರಬಹುದು.
ಮಕ್ಕಳನ್ನು ಪದೇ ಪದೇ ಪೊಲೀಸ್ ಠಾಣೆಗೆ ಕರೆಸುವಂತಿಲ್ಲ.
ಮಕ್ಕಳ ವಿವರಗಳನ್ನು ಗೋಪ್ಯವಾಗಿ ಇರಿಸಬೇಕು. ಮಾಧ್ಯಮಗಳಿಗೆ ಹೇಳುವುದಾಗಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಪ್ರಸಾರ ಮಾಡುವುದಾಗಲಿ ಮಾಡಬಾರದು.
ಹೆಣ್ಣುಮಕ್ಕಳ ವೈದ್ಯಕೀಯ ತಪಾಸಣೆಯನ್ನು ಮಹಿಳಾ ವೈದ್ಯರು ಮಾತ್ರ ಮಾಡಬೇಕು. ಮಕ್ಕಳು ನಂಬುವ ಪೋಷಕರು ಅಥವಾ ಆಪ್ತ ಸಮಾಲೋಚಕರು ಯಾರಾದರೊಬ್ಬರು ಆ ಸಮಯದಲ್ಲಿ ಮಕ್ಕಳೊಡನೆ ಇರಬೇಕು.
ಮಕ್ಕಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ, ಮಕ್ಕಳು ಹೇಳಿಕೆ ನೀಡುವ ಸಂದರ್ಭದಲ್ಲಿ ಮಗುವಿಗೆ ಆಯಾಸವಾದರೆ, ಮಾನಸಿಕವಾಗಿ ಒತ್ತಡಕ್ಕೀಡಾದರೆ ಮಧ್ಯಮಧ್ಯ ವಿಶ್ರಮಿಸಲು ಬಿಡುವು ನೀಡಲಾಗುತ್ತದೆ.
ವಿಚಾರಣೆ, ಹೇಳಿಕೆ ಅಥವಾ ಸಾಕ್ಷ್ಯ ನೀಡುವ ಸಂದರ್ಭದಲ್ಲಿ ಮಕ್ಕಳೊಂದಿಗೆ ಅವರ ಪೋಷಕರು, ಗೆಳೆಯರು ಅಥವಾ ಆಪ್ತ ಸಮಾಲೋಚಕರು ಇರಬಹುದು.
ಮಕ್ಕಳಿಗೆ ಸಹಕರಿಸಲು ಬೆಂಬಲ ವ್ಯಕ್ತಿಗಳು ಇರುತ್ತಾರೆ. ಅವರು ಮಕ್ಕಳಿಗೆ ಈ ಕೆಳಕಂಡ ರೀತಿ ಬೆಂಬಲವನ್ನು ಒದಗಿಸುತ್ತಾರೆ.
. ಕಾನೂನು, ಅಪರಾಧಕ್ಕೆ ವಿಧಿಸಬಹುದಾದ ಶಿಕ್ಷೆ, ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿರುವ ಹಂತಗಳ ಬಗ್ಗೆ ಮಾಹಿತಿ ನೀಡುತ್ತಾರೆ,
+ ತೊಂದರೆಗೀಡಾದ ಮಗುವಿಗೆ ನ್ಯಾಯಾಲಯ ಮತ್ತು ಸರ್ಕಾರ ನೀಡಬೇಕಾದ ಪರಿಹಾರ, ವೈದ್ಯಕೀಯ ನೆರವು ಇತ್ಯಾದಿ ಕುರಿತು ವಿವರಗಳನ್ನು ಒದಗಿಸುತ್ತಾರೆ.
ಅವರು ವೈಯಕ್ತಿಕ ಸಮಾಲೋಚನೆ ನಡೆಸುವ ಮೂಲಕ ಮಗುವಿನಲ್ಲಿರುವ ಮಾನಸಿಕ ಶೂನ್ಯವನ್ನು ತುಂಬುತ್ತಾರೆ.
ವಕೀಲರು ಮಕ್ಕಳಿಗೆ ಮುಜುಗುರ ತರುವ, ಬೇಸರ ಉಂಟುಮಾಡುವ ಪ್ರಶ್ನೆಗಳನ್ನು ಕೇಳುವಂತಿಲ್ಲ.









