ಬೆಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಏರಿಕೆ ಮಾಡಿ ಒಟ್ಟು ಮೀಸಲು ಪ್ರಮಾಣವನ್ನು ಶೇ.50ರಿಂದ 56ಕ್ಕೆ ಹೆಚ್ಚಿಸಿ ಜಾರಿಗೊಳಿಸಿದ್ದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಡಗಗಳ ಕಾಯ್ದೆ-2022 ಅನ್ವಯ ಈಗಾಗಲೇ ಆರಂಭಿಸಿರುವ ಸರ್ಕಾರಿ ಹುದ್ದೆಗಳ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆ ಮುಂದುವರಿಸಲು ವಿವಿಧ ಷರತ್ತು ವಿಧಿಸಿ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿದೆ.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಕಾಯಿದೆ ಅನ್ವಯ ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಆರಂಭಿಸಿದ್ದು, ಅಂತಿಮ ಹಂತದಲ್ಲಿದೆ. ಒಟ್ಟು 3,644 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸುವುದಿಲ್ಲ. ಹೊಸ ಕಾಯಿದೆ ಅಡಿ ಈಗಾಗಲೇ ನೇಮಕಾತಿ ಮಾಡಿರುವುದಕ್ಕೆ ಮಧ್ಯಂತರ ಆದೇಶ ಅನ್ವಯಿಸಲ್ಲ ಎಂದು ಆದೇಶಿಸಬೇಕು. ಅರ್ಜಿದಾರರು ಸರ್ಕಾರದ ಅಧಿಸೂಚನೆಗಳನ್ನು ಪ್ರಶ್ನಿಸಿಲ್ಲ. ಹೀಗಾಗಿ, ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಮತ್ತು ಬಡ್ತಿ ನೀಡಲು ಸರ್ಕಾರಕ್ಕೆ ಅನುಮತಿಸಬೇಕು ಎಂದು ಕೋರಿದರು.
ಮೀಸಲಾತಿ ಹೆಚ್ಚಿಸಿರುವುದರ ಅನುಸಾರ ಹೊಸದಾಗಿ ಯಾವುದೇ ನೇಮಕಾತಿ ಅಥವಾ ಬಡ್ತಿ ನೀಡುವಂತಿಲ್ಲ. ಕಾಯಿದೆಯ ಅನ್ವಯ ಈಗಾಗಲೇ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು. ನೇಮಕಾತಿ ಅಥವಾ ಸೀಟುಗಳ ಹಂಚಿಕೆಯು ಹಾಲಿ ಅರ್ಜಿಗಳ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಇದನ್ನು ನೇಮಕಾತಿ ಅಥವಾ ಬಡ್ತಿ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಈ ವಿಚಾರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಹಕ್ಕು ದೊರೆಯುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಉದ್ಯೋಗಾಕಾಂಕ್ಷಿಯೊಬ್ಬರ ಪರ ವಕೀಲರು, ನೇಮಕಾತಿ ಪ್ರಕ್ರಿಯೆ ನಡೆಯಲಿ, ಆದರೆ, ಫಲಿತಾಂಶವನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಪ್ರಕಟಿಸಬಾರದು. ಬಿಬಿಎಂಪಿ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿದ್ದೇವೆ. ಆಯ್ಕೆಯಾದ ಮೇಲೆ ನೇಮಕಾತಿ ಆದೇಶ ನೀಡಲು ಮೂರು ತಿಂಗಳಾಗುತ್ತದೆ. ಜಾತಿ ಪ್ರಮಾಣ ಪತ್ರ ಮತ್ತಿತರ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ನಿವೃತ್ತ ನ್ಯಾ. ಹೆಚ್.ಎನ್ ನಾಗಮೋಹನ್ ದಾಸ್ ಸಮಿತಿಯ ವರದಿ ಅನುಸಾರ ಮೀಸಲಾತಿ ಹೆಚ್ಚಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ನ್ಯಾ. ನಾಗಮೋಹನ್ ದಾಸ್ ಸಮಿತಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಿಲ್ಲ ಎಂದು ಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.








