ನವದೆಹಲಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಅಭಯ್ ಎಸ್.ಓಕಾ ಅವರನ್ನೊಳಗೊಂಡ ಪೀಠವು ಅರ್ಜಿದಾರರನ್ನು ಯಾವ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಶ್ನಿಸಿತು. “ಇದು ನ್ಯಾಯಾಲಯದ ಕೆಲಸವೇ? ನಾವು ವೆಚ್ಚಗಳನ್ನು ವಿಧಿಸಲು ಒತ್ತಾಯಿಸುವಾಗ ನೀವು ಅಂತಹ ಅರ್ಜಿಗಳನ್ನು ಏಕೆ ಸಲ್ಲಿಸುತ್ತೀರಿ? ಯಾವ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ? ನೀವು ನ್ಯಾಯಾಲಯಕ್ಕೆ ಬರುವುದರಿಂದ ನಾವು ಕಾನೂನನ್ನು ಗಾಳಿಗೆ ತೂರಬೇಕೇ? ಎಂದು ನ್ಯಾಯಪೀಠ ಹೇಳಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಗೋರಕ್ಷಣೆ ಬಹಳ ಮುಖ್ಯವಾದ ವಿಷಯವಾಗಿದೆ ಅಂತ ತಿಳಿಸಿದರು. ಗೋವನ್ಶ್ ಸೇವಾ ಸದನ್ ಮತ್ತು ಇತರರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಇದೇ ವೇಳೆ ನ್ಯಾಯಾಪೀಠ ದಂಡದ ಎಚ್ಚರ ನೀಡಿದ ಹಿನ್ನಲೆಯಲ್ಲಿ ಅರ್ಜಿಯನ್ನು ವಾಪಸ್ಸು ತೆಗೆದುಕೊಳ್ಳಲಾಗಿದೆ ಅಂತ ತಿಳಿದು ಬಂದಿದೆ.