ನವದೆಹಲಿ : ಭಾರತದ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಸರ್ಕಾರ ಸಜ್ಜಾಗಿದೆ. ಮೇ 1ರಿಂದ ದೇಶಾದ್ಯಂತ ಫಾಸ್ಟ್ಟ್ಯಾಗ್ ಬದಲಿಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹೊಸ ವ್ಯವಸ್ಥೆಯು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟ್ಲೈಟ್ ಸಿಸ್ಟಮ್ (GNSS) ತಂತ್ರಜ್ಞಾನ ಬಳಸಿಕೊಂಡು ವಾಹನಗಳ ಚಲನೆಯನ್ನು ಟ್ರ್ಯಾಕ್ ಮಾಡಿ, ಸಂಚರಿಸಿದ ದೂರದ ಆಧಾರದ ಮೇಲೆ ಟೋಲ್ ಶುಲ್ಕ ಲೆಕ್ಕಹಾಕಲಿದೆ.
ಪ್ರಯಾಣಿಕರು ಸಂಚರಿಸಿದ ನಿಖರ ದೂರಕ್ಕೆ ತಕ್ಕಂತೆ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಸಣ್ಣ ಅಂತರದ ಪ್ರಯಾಣಿಕರಿಗೆ ಹಣ ಉಳಿತಾಯವಾಗಲಿದೆ. ಟೋಲ್ ಬೂತ್‌ಗಳನ್ನು ತೆಗೆದುಹಾಕುವುದರಿಂದ ಟ್ರಾಫಿಕ್ ಜಾಮ್‌ನ ಸಮಸ್ಯೆ ಕಡಿಮೆಯಾಗಿ, ವಾಹನ ಚಾಲಕರ ಮತ್ತು ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.
ಆನ್‌ಬೋರ್ಡ್ ಯೂನಿಟ್ (OBU) ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಲೆಕ್ಕಹಾಕಿ, ಚಾಲಕರ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತಗೊಳ್ಳಲಿದೆ. ಇದರಿಂದ ಕೈಯಿಂದ ಶುಲ್ಕ ಸಂಗ್ರಹದ ದೋಷಗಳು ಮತ್ತು ವಂಚನೆ ಸಾಧ್ಯತೆ ಕಡಿಮೆಯಾಗುತ್ತದೆ. ಟ್ರಾಫಿಕ್ ಜಾಮ್ ಕಡಿಮೆಯಾಗುವುದರಿಂದ ಇಂಧನ ಬಳಕೆ ಮತ್ತು ವಾಹನ ಹೊಗೆ ಕಡಿಮೆಯಾಗಿ, ಪರಿಸರಕ್ಕೆ ಒಳಿತಾಗಲಿದೆ.
GNSS ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ?
ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಒಂದು ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಪ್ರಯಾಣಿಸಿದ ದೂರವನ್ನು ಆಧರಿಸಿ ಅವರ ಬ್ಯಾಂಕ್ ಖಾತೆಗಳಿಂದ ನೇರವಾಗಿ ಹಣವನ್ನು ಕಡಿತಗೊಳಿಸಲಾಗುತ್ತದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, ಹೊಸ ವ್ಯವಸ್ಥೆಯು ಸಮಯ ಮತ್ತು ವೆಚ್ಚ-ಪರಿಣಾಮಕಾರಿ ಮತ್ತು ವೇಗವಾಗಿರುತ್ತದೆ.
GNSS, FASTag ಗಿಂತ ಹೇಗೆ ಭಿನ್ನವಾಗಿದೆ?
FASTag ವ್ಯವಸ್ಥೆಯು ಸಾಂಪ್ರದಾಯಿಕ ನಗದು ಸಂಗ್ರಹ ವಿಧಾನಕ್ಕಿಂತ ವೇಗವಾಗಿದ್ದರೂ, ವಾಹನಗಳು ಟೋಲ್ ಬೂತ್‌ನಲ್ಲಿ ಹಲವೊಮ್ಮೆ ಕಾದು ನಿಲ್ಲಬೇಕಾಗುತ್ತದೆ. ಹಲವು ಬಾರಿ ವಿಶೇಷವಾಗಿ ಪೀಕ್ ಅವರ್ ಗಳಲ್ಲಿ ಇದು ದೀರ್ಘ ಸರತಿ ಸಾಲುಗಳಿಗೆ ಕಾರಣವಾಗುತ್ತದೆ.ಆದಾಗ್ಯೂ, ಜಿಎನ್ ಎಸ್ ಎಸ್ ವ್ಯವಸ್ಥೆಯು ವಾಹನಗಳ ಸ್ಥಳಗಳನ್ನು ಪತ್ತೆಹಚ್ಚಲು ಉಪಗ್ರಹಗಳೊಂದಿಗೆ ಸಂವಹನ ನಡೆಸುವ ವರ್ಚುವಲ್ ಟೋಲ್ ಬೂತ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಟ್ರ್ಯಾಕ್ ಮಾಡಲಾದ ಸ್ಥಳದ ಪ್ರಕಾರ, ವಾಹನವು ಪ್ರಯಾಣಿಸಿದ ದೂರವನ್ನು ವಿಶ್ಲೇಷಣೆ ಮಾಡಿ ಟೋಲ್ ನ್ನು ಲೆಕ್ಕಹಾಕಲಾಗುತ್ತದೆ.