ಬಳ್ಳಾರಿ : ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಚಿನ್ನ ಕಳವು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಶುಕ್ರವಾರ ಬಳ್ಳಾರಿಯ ಚಿನ್ನದ ಉದ್ಯಮಿ ಸೇರಿದಂತೆ ಇಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಬರಿಮಲೆ ದೇಗುಲದಲ್ಲಿ ಕಲಾಕೃತಿಗಳಿಗೆ ವಿದ್ಯುತ್ ಲೇಪನ ಮಾಡಿದ್ದ ‘ಸ್ಮಾರ್ಟ್ ಕ್ರಿಯೇಷನ್ಸ್’ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಈ ಹಿಂದೆ ಪ್ರಕರಣ ಸಂಬಂಧ ಕೇರಳದ ಟಿಡಿಬಿಯ ಮಾಜಿ ಆಡಳಿತಾಧಿಕಾರಿ ಎಸ್. ಶ್ರೀಕುಮಾರ್ ಅವರನ್ನು ಬಂಧಿಸಲಾಗಿತ್ತು. 2019ರಲ್ಲಿ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ದ್ವಾರಪಾಲಕರ ಮೂರ್ತಿಗಳು ಹಾಗೂ ಗರ್ಭಗುಡಿಯ ದ್ವಾರಕ್ಕೆ ವಿದ್ಯುತ್ ಲೇಪನಕ್ಕಾಗಿ ಸ್ಮಾರ್ಟ್ ಕ್ರಿಯೇಷನ್‌ಗೆ ತೆಗೆದಕೊಂಡು ಹೋಗಿದ್ದ. ಆ ವೇಳೆ ಅದರಲ್ಲಿದ್ದ ಚಿನ್ನವನ್ನು ತೆಗೆಯಲಾಗಿದೆ ಎನ್ನುವುದು ಎಸ್‌ಐಟಿ ತನಿಖೆಯಲ್ಲಿ ಗೊತ್ತಾಗಿದೆ.
ಇದಕ್ಕೂ ಮುನ್ನ, ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಬಗ್ಗೆ ಕೇರಳ ಹೈಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿತ್ತು. ಕೆಲವು ಅಪರಾಧಿಗಳನ್ನು ರಕ್ಷಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆಯೇ ಎಂದು ಪ್ರಶ್ನಿಸಿತ್ತು. ಆರೋಪಿಗಳಾದ ಎನ್.ವಾಸು, ಮುರಾರಿ ಬಾಬು ಮತ್ತು ಕೆ.ಎಸ್. ಬೈಜು ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎ. ಬಧರುದ್ದೀನ್, ಕಳ್ಳತನದಲ್ಲಿ ಭಾಗಿಯಾಗಿರುವ ‘ಪ್ರಭಾವಿ ವ್ಯಕ್ತಿ’ಗಳನ್ನು ತನಿಖೆ ನಡೆಸಬೇಕು ಎಂದು ಖಡಕ್ ಸೂಚನೆ ನೀಡಿದ್ದರು.








