ಬೆಂಗಳೂರು : ಬೆಂಗಳೂರಿಗೆ ಕನಿಷ್ಠ 1 ಲಕ್ಷ ಕೋಟಿ ರೂ. ಅನುದಾನ ನೀಡಬೇಕು ಎಂದು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ. ಮೆಟ್ರೋ ಯೋಜನೆಯ ಭೂಸ್ವಾಧೀನಕ್ಕೆಲ್ಲ ರಾಜ್ಯ ಸರ್ಕಾರವೇ ಹಣ ನೀಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಶೇ.50 ರಷ್ಟು ನೀಡಬೇಕಾಗಿತ್ತು, ಅದನ್ನೂ ನೀಡಿಲ್ಲ. ಆದರೂ ನಾವು ಈ ರಾಜ್ಯದ, ಬೆಂಗಳೂರಿನ ಜನರ ಹಿತಕ್ಕಾಗಿ ಈ ಕೆಲಸ ಪೂರ್ಣಗೊಳಿಸಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಮೆಟ್ರೋ ಹಳದಿ ಮಾರ್ಗಕ್ಕೆ ರಾಜ್ಯ ಸರ್ಕಾರ ಶೇ.80 ರಷ್ಟು ಖರ್ಚು ಮಾಡಿದ್ದರೆ, ಕೇಂದ್ರದ ಬಿಜೆಪಿ ಸರ್ಕಾರ ಶೇ.20 ರಷ್ಟು ಮಾತ್ರ ಖರ್ಚು ಮಾಡಿದೆ. ಕೆಲವೊಂದು ಕಡೆ ಶೇ.11 ರಷ್ಟು ಮಾತ್ರ ಖರ್ಚು ಮಾಡಿದೆ. ಬೆಂಗಳೂರು ದೇಶದಲ್ಲಿಯೇ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ನಗರವಾದರೂ ಸಿಗುತ್ತಿರುವ ಅನುದಾನ ಮಾತ್ರ ಬಹಳ ಕಡಿಮೆ ಎಂದರು.
ಬಿಜೆಪಿಯವರು ಎಲ್ಲಾ ನಾವೇ ಮಾಡಿದ್ದೇವೆ ಎನ್ನುತ್ತಾರೆ. ಅವರದ್ದು ಏನೇನೂ ಸಾಧನೆಯಿಲ್ಲ. ಯಾವೊಬ್ಬ ಸಂಸದನೂ ಸಹ ಬೆಂಗಳೂರು ನಗರಕ್ಕೆ, ರಾಜ್ಯಕ್ಕೆ ಹತ್ತು ರೂಪಾಯಿ ಸಹಾಯ ತಂದಿಲ್ಲ. ಯಾವ ರೀತಿಯ ಸಹಕಾರವನ್ನೂ ಸಹ ಕೊಟ್ಟಿಲ್ಲ. ಕರ್ನಾಟಕದ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು. ಕೇಂದ್ರ ಜಲಶಕ್ತಿ ಸಚಿವರು ಮಾತ್ರ ಕೆಲವೊಮ್ಮೆ ನಮ್ಮ ಮನವಿಗಳಿಗೆ ಸ್ಪಂದಿಸಿದ್ದಾರೆ. ಅದರ ಹೊರತಾಗಿ ಒಂದೇ ಒಂದು ರೂಪಾಯಿ ಸಹ ಬಂದಿಲ್ಲ. ನರೇಗಾ ಯೋಜನೆಗೂ ಹಣ ನೀಡಿಲ್ಲ ಎಂದು ಆರೋಪಿಸಿದರು.