ಬೆಂಗಳೂರು : ಕಳೆದ ಏಪ್ರಿಲ್ 16 ರಂದು ಬೀದರ್ ಶಿವಮೊಗ್ಗ ಹಾಗೂ ಧಾರವಾಡದಲ್ಲಿ ಸಿಇಟಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಂದ ಜನಿವಾರ ತೆಗೆಸಿದ ಪ್ರಕರಣ ಇಡೀ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಇದೇ ವಿಚಾರವಾಗಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ಮಾತನಾಡಿ, ಈ ಹಿಂದೆ ಶೂದ್ರರ ಹೆಣ್ಣು ಮಗಳ ತಾಳಿ ತೆಗೆಸಿದ್ದರು, ಇದೀಗ ಜನಿವಾರ ತೆಗೆಸಿದ್ದಾರೆ. ನಾನು ಎರಡು ಘಟನೆ ಖಂಡಿಸುತ್ತೇನೆ. ಆದರೆ ತಾಳಿ ತೆಗೆಸಿದ್ಧಕ್ಕಿಂತಲೂ ಜನಿವಾರ ತೆಗೆಸಿದ್ದು ಬಹಳ ದೊಡ್ಡ ವಿಚಾರವಾಗಿದೆ ಎಂದು ತಿಳಿಸಿದರು.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಿವಾರ ಕತ್ತರಿಸಿದ್ದನ್ನು ನಾನು ಖಂಡಿಸುತ್ತೇನೆ, ಜನಿವಾರ ಕತ್ತರಿಸಿದರು ಅಂತ ನಾನೇನು ಅದರ ಬೆಂಬಲವಾಗಿ ಮಾತನಾಡುವುದಿಲ್ಲ ಎಂದರು. ಇದೇ ವೇಳೆ ಒಬ್ಬ ಹೆಣ್ಣಮಗಳ ತಾಳಿಯನ್ನು ತೆಗೆಸಿದಾಗ ಮಾಧ್ಯಮದಲ್ಲಿ ಯಾರೂ ಸಹ ಮಾತನಾಡಲಿಲ್ಲವಲ್ಲ. ತಾಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಜನಿವಾರಕ್ಕೂ ಇದೆ.
ಜನಿವಾರ ತೆಗೆಸಿದ್ದು ಖಂಡನೀಯ, ತಾಳಿ ತೆಗೆಸಿದ್ದೂ ಖಂಡನೀಯ. ಆದರೆ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗಿದ್ದು ಜನಿವಾರದ ವಿಷಯ. ಏಕೆಂದರೆ ತಾಳಿ ತೆಗೆಸಿದ್ದು ಶೂದ್ರರ ಹೆಣ್ಣು ಮಗಳದ್ದು. ಬ್ರಾಹ್ಮಣರ ಜನಿವಾರ ಚರ್ಚೆಯಾದಷ್ಟು ಆ ವಿಷಯ ಚರ್ಚೆಯಾಗಲೇ ಇಲ್ಲ. ಶೋಷಿತ ವರ್ಗದವರ ಮೇಲೆ ಏನೇ ದಬ್ಬಾಳಿಕೆಯಾದರೂ ಯಾವ ಮಾಧ್ಯಮದಲ್ಲೂ ಬರಲ್ಲ, ಯಾವ ರಾಜಕೀಯ ನಾಯಕನೂ ಸಹ ಮಾತನಾಡಲ್ಲ ಎಂದು ರಾಜಣ್ಣ ಬೇಸರ ಹೊರಹಾಕಿದರು.