ನವದೆಹಲಿ: ದೆಹಲಿ ಬಿಜೆಪಿ ಶಾಸಕರು ರೇಖಾ ಗುಪ್ತಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿ ಮತ್ತು ಕೇಂದ್ರಾಡಳಿತ ಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ದೆಹಲಿ ಬಿಜೆಪಿ ಶಾಸಕರಾದ ವಿಜೇಂದರ್ ಗುಪ್ತಾ ಮತ್ತು ಸತೀಶ್ ಉಪಾಧ್ಯಾಯ ಅವರು ಗುಪ್ತಾ ಅವರ ಹೆಸರನ್ನು ಪ್ರಸ್ತಾಪಿಸಿದರು. ರೇಖಾ ಗುಪ್ತಾ ಮಾಜಿ ಕೌನ್ಸಿಲರ್ ಮತ್ತು ಉಪ ಮೇಯರ್ ಆಗಿದ್ದು, ಶಾಲಿಮಾರ್ ಬಾಗ್ ವಿಧಾನಸಭಾ ಸ್ಥಾನದಿಂದ ಎಎಪಿಯ ಬಂದನಾ ಕುಮಾರಿ ಅವರನ್ನು ಸೋಲಿಸಿ ವಿಜಯಶಾಲಿಯಾಗಿ ಹೊರಹೊಮ್ಮಿದರು.
ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ಮತ್ತು ಅತಿಶಿ ನಂತರ ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಮತ್ತು ಆರು ಕ್ಯಾಬಿನೆಟ್ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಮುಖ್ಯಮಂತ್ರಿ ಮತ್ತು ಹೊಸ ಕ್ಯಾಬಿನೆಟ್ ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ದೆಹಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಈ ಹಿಂದೆ ರವಿಶಂಕರ್ ಪ್ರಸಾದ್ ಮತ್ತು ಓಂ ಪ್ರಕಾಶ್ ಧಂಕರ್ ಅವರನ್ನು ಪಕ್ಷದ ಕೇಂದ್ರ ವೀಕ್ಷಕರಾಗಿ ನೇಮಿಸಿತ್ತು.