ಮುಂಬೈ : ನಮ್ಮ ದಾಂಪತ್ಯದ ಕುರಿತ ಸುದ್ದಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ, ಟೀಕೆ ನೋಡಿ ಖಿನ್ನತೆಗೆ ಜಾರಿದ್ದೆ. ಈ ಸಂದರ್ಭದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೂ ಯೋಚಿಸಿದ್ದೆ ಎಂದು ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸುಮಾರು 5 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಯಜುವೇಂದ್ರ ಮತ್ತು ಧನಶ್ರೀ ಅವರಿಗೆ ಈ ವರ್ಷದ ಮಾರ್ಚ್ 20 ರಂದು ಬಾಂಬೆ ಹೈಕೋರ್ಟ್ ವಿಚ್ಛೇದನ ನೀಡಿತ್ತು. ಡಿವೋರ್ಸ್ ಪಡೆಯುವ ಕೆಲ ತಿಂಗಳ ಮೊದಲು ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು ಎಂದು ಚಹಲ್ ಹೇಳಿದರು. ಧನಶ್ರೀ ವರ್ಮಾಗೆ ವಿಚ್ಛೇದನ ನೀಡಿದ ವಿಚಾರದ ಬಗ್ಗೆ ಇದೇ ಮೊದಲ ಬಾರಿಗೆ ಚಹಲ್ ಮೌನ ಮುರಿದಿದ್ದಾರೆ. ರಾಜ್ ಶಮಾನಿ ಯೂಟ್ಯೂಬ್ ಚಾನಲ್‌ನಲ್ಲಿ ವಿಚ್ಛೇದನದ ಬಗ್ಗೆ ಸಾಕಷ್ಟು ವಿಚಾರ ತಿಳಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯ ಸಮಯದಲ್ಲಿ ನಾನು ರಾಜ್ಯ ಕ್ರಿಕೆಟ್ ತಂಡದಿಂದ ವಿರಾಮ ಕೇಳಿದ್ದೆ. ನಮ್ಮಿಬ್ಬರ ಮಧ್ಯೆ ಹೊಂದಾಣಿಕೆಯಾಗದ ಕಾರಣ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ. ಈ ಸುದ್ದಿ ಪ್ರಕಟವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿದ್ದ ಚರ್ಚೆ, ಟೀಕೆಗಳನ್ನು ನೋಡಿ ಖಿನ್ನತೆಗೆ ಜಾರಿದ್ದೆ. ಕ್ರಿಕೆಟಿನಿಂದ ವಿರಾಮ ಪಡೆದರೂ ನಾನು ನಡುಗುತ್ತಿದ್ದೆ. ಎಸಿ ಆನ್ ಆಗಿದ್ದರೂ ಬೆವರುತ್ತಿದ್ದೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ ಸ್ನೇಹಿತ ನನ್ನನ್ನು ತಡೆದ. ಈ ಸಮಯದಲ್ಲಿ ಎರಡೇ ಗಂಟೆ ಮಲಗುತ್ತಿದ್ದೆ.
ಮದುವೆಯಾದ ಕೆಲ ಸಮಯದ ನಂತರ ನಮ್ಮ ನಡುವೆ ಹೊಂದಾಣಿಕೆ ಸಮಸ್ಯೆ ಕಾಣಿಸತೊಡಗಿತು. ಕ್ರಿಕೆಟ್ ಆಡುತ್ತಿದ್ದ ಕಾರಣ ಪತ್ನಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅವಳು ಕೂಡ ತನ್ನ ಕೆಲಸವನ್ನು ಮಾಡುತ್ತಿದ್ದಳು, ನಮಗೆ ಹೆಚ್ಚು ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದು 1-2 ವರ್ಷಗಳಿಂದ ಈ ರೀತಿ ನಡೆಯುತ್ತಿತ್ತು. ಇದರಿಂದಾಗಿ ಜಗಳ ಆಗುತ್ತಿತ್ತು.
ನನ್ನ ಬಗ್ಗೆ ಯಾರು ಏನು ಬೇಕಾದರೂ ಹೇಳಬಹುದು. ನಾನು ಇಬ್ಬರು ಸಹೋದರಿಯರ ಜೊತೆಗೆ ಬೆಳೆದಿದ್ದೇನೆ. ಹೆಣ್ಣು ಮಕ್ಕಳನ್ನು ಗೌರವಿಸುವುದು ನನಗೆ ತಿಳಿದಿದೆ. ದೇವರ ದಯೆಯಿಂದ ನಾನು ಬದುಕಿದ್ದೇನೆ. ವಿಚ್ಛೇದನ ಪಡೆದ ನಂತರ ಜನರು ನನ್ನನ್ನು ಮೋಸಗಾರ ಎಂದು ಆರೋಪಿಸಿದರು. ನಾನು ನನ್ನ ಜೀವನದಲ್ಲಿ ಎಂದಿಗೂ ಮೋಸ ಮಾಡಿಲ್ಲ. ನಾನು ಆ ರೀತಿಯ ವ್ಯಕ್ತಿಯಲ್ಲ. ಜನರಿಗೆ ಏನೂ ತಿಳಿಯದ ಕಾರಣ ಅವರು ನನ್ನನ್ನು ದೂಷಿಸುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.