ಕೊಪ್ಪಳ : ಇತ್ತೀಚಿಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ವಾಲ್ಮೀಕಿ ಜಾತ್ರೆ ಕಾರ್ಯಕ್ರಮದಲ್ಲಿ ಸಚಿವ ಎಚ್ ಸಿ ಮಹದೇವಪ್ಪ ರಾಮನಿಂದ ವಾಲ್ಮೀಕಿಯೊ ಅಥವಾ ವಾಲ್ಮೀಕಿಯಿಂದ ರಾಮನೋ ಎನ್ನುವುದರ ಕುರಿತು ಚರ್ಚಿಸಬೇಕಿದೆ. ಅಯೋಧ್ಯೆ ರಾಮನೇ ಬೇರೆ ವಾಲ್ಮೀಕಿ ರಾಮನೇ ಬೇರೆ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ರಾಮ ಒಬ್ಬನೇ ಆದರೆ ರಾಮನನ್ನು ಸೃಷ್ಟಿಸಿದ್ದು ವಾಲ್ಮೀಕಿ ಎಂದು ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ರಾಮನೇ ಬೇರೆ ಅಯೋಧ್ಯೆ ರಾಮನೆ ಬೇರೆ ಎಂದು ಸಚಿವ ಎಚ್.ಸಿ ಮಹಾದೇವಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ರಾಮ ಒಬ್ಬನೇ ಆದರೆ ರಾಮನನ್ನು ಸೃಷ್ಟಿ ಮಾಡಿದ್ದು ವಾಲ್ಮೀಕಿ. ಬಿಜೆಪಿಯವರು ಕೆಲ ದೇವರನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಕಿಡಿ ಕಾರಿದರು.
ಬಿಜೆಪಿ ನಾಯಕರು ಅಭಿವೃದ್ಧಿಯ ಬಗ್ಗೆ ಎಲ್ಲೂ ಮಾತನಾಡಲ್ಲ. ನಾವು ಸಹ ರಾಮನ ಭಕ್ತರಿದ್ದೇವೆ. ಆಂಜನೇಯನ ಭಕ್ತರಿದ್ದೇವೆ. ಎಷ್ಟು ದಿನ ನೀವು ಜನರ ಮೇಲೆ ಧರ್ಮದ ಪ್ರಯೋಗ ಮಾಡುತ್ತೀರಿ? ಜನ ಅವರಿಗೆ ಪಾಠ ಕಲಿಸುತ್ತಾರೆ. ಆದರೆ ಇವಿಎಂ ಅವರಿಗೆ ಸಾಥ್ ನೀಡುತ್ತಿದೆ. ನಾನು ದೇವರನ್ನು ನಂಬುತ್ತೇನೆ, ಸಾಧ್ಯವಾದರೆ ಪ್ರಯಾಗ್ ರಾಜ್ ಗೂ ಸಹ ಹೋಗುತ್ತೇನೆ ಎಂದರು.
ಇನ್ನು ಶುಭವಾಗಲಿ ಎನ್ನುವ ಪದ ಬರೆಯಲು ಪರದಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕನ್ನಡ ಭಾಷೆಯಲ್ಲಿ ಯಾರು ಪರಿಪಕ್ವರಿದ್ದಾರೆ? ಬರೆಯುವಾಗ ಒತ್ತು, ದೀರ್ಘ ಸ್ವರಗಳು, ಹೆಚ್ಚು ಕಡಿಮೆ ಆಗೇ ಆಗುತ್ತದೆ.ಕನ್ನಡ ಭಾಷೆಯ ಬಗ್ಗೆ ಬಹಳ ಗೌರವವಿದೆ. ನಡೆಯುವವನೇ ಎಡುತ್ತಾನೆ. ಬೆಡ್ ಮೇಲೆ ಇರುವವನು ಎಡವಲು ಆಗುತ್ತಾ? ಎಸ್ಸಿ ಎಸ್ಟಿ ಸಮಾವೇಶ ಮಾಡಲು ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಮಾವೇಶ ಬೇಡ ಅಂತ ಹೈಕಮಾಂಡ್ ಹೇಳಿಲ್ಲ. ಈ ಕುರಿತು ಚರ್ಚಿಸುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.