ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಸೇರಿದಂತೆ ರೌಡಿ ಶೀಟರ್ ಗಳಿಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದರು. ಇದಾದ ಬಳಿಕವೂ ಜೈಲಿನಲ್ಲಿ ಮೊಬೈಲ್ ಬಳಕೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಹೌದು ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲಲ್ಲಿರುವ ಆರೋಪಿ, ನಟ ದರ್ಶನ್ ಈ ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದರು. ಅಲ್ಲಿ ದರ್ಶನ್ಗೆ ಹಾಗೂ ಕೆಲ ರೌಡಿ ಶೀಟರ್ಗಳಿಗೆ ರಾಜಾತಿಥ್ಯ ನೀಡಿರುವ ಪ್ರಕರಣ ಸದ್ದು ಮಾಡಿತ್ತು. ಆದರೂ ಸಹ ಜೈಲಿನಲ್ಲಿ ಇದ್ದುಕೊಂಡೆ ಕೆಲ ರೌಡಿ ಶೀಟರ್ ಗಳು ಬೆದರಿಕೆ ಹಾಕುವ ಘಟನೆಗಳು ನಡೆದಿದ್ದು ಬೆಳಕಿಗೆ ಬಂದಿದೆ.
ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ ರೌಡಿ ಶೀಟರ್!
ದರ್ಶನ್ ಪ್ರಕರಣದ ಬಳಿಕ ಕೂಡ ಜೈಲಲ್ಲಿ ಮೊಬೈಲ್ ಬಳಕೆ ಮುಂದುವರೆದಿದೆ. ಜೈಲ್ಲಿನಿಂದಲ್ಲೇ ಇನ್ಸ್ಟಾಗ್ರಾಮ್ ಮೂಲಕ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. 2021 ರಲ್ಲಿ ರಾಜಧಾನಿಯನ್ನ ಬೆಚ್ಚಿ ಬೀಳಿಸಿದ್ದ ಜೋಸೆಫ್ ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ವಾಯ್ಸ್ ಮೇಸೆಜ್ ಮಾಡಿ ಬೆದರಿಕೆವೊಡ್ಡಿದ್ದಾರೆ. ಜೈಲ್ಲಿನಲ್ಲಿರುವ ಕೈದಿ ಸೋಮಶೇಖರ್ ಅಲಿಯಾಸ್ ಸೋಮ ಎಂಬಾತ ಆರ್ಮುಗಂ ಬೆದರಿಕೆ ವೊಡ್ಡಿದ್ದಾನೆ ಎನ್ನಲಾಗಿದೆ.
ಬಬ್ಲಿ ಕೊಲೆ ಪ್ರಕರಣದಲ್ಲಿ ಆರ್ಮುಗಂ ಪ್ರತ್ಯಕ್ಷ ಸಾಕ್ಷಿ. ಸೆಪ್ಟೆಂಬರ್ನಲ್ಲಿ ಸೋಮ ಹೆಸರಿನ ಐಡಿಯಿಂದ ಮೂರು ವಾಯ್ಸ್ ಮೇಸೆಜ್ ಕಳುಹಿಸಿ. ‘ಜೋಸೆಫ್ ಬಾಬು ಅಲಿಯಾಸ್ ಬಬ್ಲಿ ಕೊಲೆ ಕೇಸ್ನಲ್ಲಿ ಯಾರೊಬ್ಬರು ಕೋರ್ಟ್ನಲ್ಲಿ ಸಾಕ್ಷಿ ಹೇಳಬಾರದು ಎಂದು ಬೆದರಿಸಿದ್ದಾರೆ. ಹೇಳಿದಂತೆ ಕೇಳದಿದ್ದರೆ ಎಲ್ಲರನ್ನೂ ಹೊಡೆದು ಹಾಕುತ್ತೇವೆ. ವಿವೇಕನಗರದಲಿ ನಡೆದ ರೌಡಿ ಮಿಲ್ಟ್ರಿ ಸತೀಶ್ ಹತ್ಯೆ ಬಗ್ಗೆಯೂ ಮಾತನಾಡಿದ್ದು, ಮಿಲ್ಟ್ರಿ ಸತೀಶನನ್ನು ಹೊಡೆಸಿದ್ದೇವೆ. ಆಟೋ ಓಡಿಸುವ ನಿನ್ನನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಇದೀಗ ಘಟನೆ ಕುರಿತಂತೆ ಪರಪ್ಪನ ಜೈಲಿನಿಂದಲೇ ಧಮ್ಕಿ ಹಾಕಿರುವ ಬಗ್ಗೆ ಆರ್ಮುಗಂನಿಂದ ಸಿಸಿಬಿಗೆ ದೂರು ನೀಡಿದ್ದು, ಸಿಸಿಬಿಯಲ್ಲಿ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ. ನಟ ದರ್ಶನ್ ಗೆ ನೀಡಿದ ರಾಜಾತಿಥ್ಯ ಪ್ರಕರಣದ ಬಳಿಕವೂ ಕೂಡ ಈ ರೀತಿ ಆರೋಪಿಗಳು ಮೊಬೈಲ್ ಬಳಕೆಗೆ ಕಡಿವಾಣ ಹಾಕುವಲ್ಲಿ ಸಿಬ್ಬಂದಿಗಳು ವಿಫಲರಾಗಿದ್ದಾರೆ ಹಾಗೂ ಅವರಿಗೆ ಸಿಬ್ಬಂದಿಗಳೇ ಸಹಾಯ ಮಾಡುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.