ಬೆಂಗಳೂರು : ಕನ್ನಡಿಗರಿಗೆ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಸಿಹಿಸುದ್ದಿ ನೀಡಿದ್ದು, ಮುಂಬರುವ ದಿನಗಳಲ್ಲಿ ರೈಲ್ವೆ ಇಲಾಖೆಯ ಎಲ್ಲಾ ನೇಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸುವಂತೆ ರೈಲ್ವೆ ಮಂಡಳಿ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನೈರುತ್ಯ ರೈಲ್ವೆ ಸಹಾಯಕ ಲೋಕೋ ಪೈಲಟ್ ಹುದ್ದೆಗಳ ಭರ್ತಿಗೆ ಸಾಮಾನ್ಯ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಇಂಗ್ಲಿಷ್, ಹಿಂದಿ ಜೊತೆಗೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡುವಂತೆ ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ
ಇಲಾಖೆಯಲ್ಲಿ ಮುಂಬಡ್ತಿ ನೀಡಲು ನಡೆಸುತ್ತಿದ್ದ ಸಾಮಾನ್ಯ ವಿಭಾಗ ಸ್ಪರ್ಧಾತ್ಮಕ ಪರೀಕ್ಷೆಯನ್ನು ಶೀಘ್ರವೇ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ನೀಡುವ ಆದೇಶ ಹೊರಬೀಳಲಿದೆ ಎಂದು ಹೇಳಿದ್ದಾರೆ.
ಪರೀಕ್ಷೆಗೆ ಸುತ್ತೋಲೆ ಹೊರಡಿಸುವ ಸಂದರ್ಭದಲ್ಲಿ ಕನ್ನಡಕ್ಕೆ ಅವಕಾಶ ನೀಡಿ ನಂತರ ಹಾಲ್ ಟಿಕೆಟ್ ನಲ್ಲಿ ಹಿಂದಿ, ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯುವಂತೆ ತಿಳಿಸಲಾಗಿತ್ತು. ಈ ಬಗ್ಗೆ ರೈಲ್ವೆ ನೌಕರರ ಸಂಘಟನೆಗಳು ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿದ್ದವು. ಹೀಗಾಗಿ ಆಗಸ್ಟ್ 3ರಂದು ಶನಿವಾರ ನಡೆಯಬೇಕಿದ್ದ ಪರೀಕ್ಷೆಯನ್ನು ನೈರುತ್ಯ ರೈಲ್ವೆ ರದ್ದುಪಡಿಸಿ ಮುಂದೂಡಿದೆ.
ಇನ್ನು ರಾಜ್ಯದ 59 ರೈಲ್ವೆ ನಿಲ್ದಾಣಗಳಲ್ಲಿ ಸುಮಾರು 54 ನಿಲ್ದಾಣಗಳನ್ನು ಮೇಲ್ದೇರ್ಜೆಗೇರಿಸುವ ಅಭಿವೃದ್ಧಿ ಕಾಮಗಾರಿಗಳು 2025-26 ರೊಳಗೆ ಪೂರ್ಣಗೊಳಲಿವೆ. ಉಳಿದ ಕಾಮಕಾರಿಗಳು ಶೀಘ್ರವೇ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.