ಶಿವಮೊಗ್ಗ : ಮತಗಳ್ಳತನ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರಾಹುಲ್ ಗಾಂಧಿಯವರ ವಿಚಾರವಾಗಿ ಕಾಂಗ್ರೆಸ್‍ಗೆ ಮತಗಳ್ಳತನದ ಹಿನ್ನೆಲೆ ಬಹಳ ಹಿಂದಿನಿಂದಲೂ ಇದೆ. ರಾಹುಲ್ ಗಾಂಧಿಯವರ ಅಜ್ಜಿಯೇ ಇದರಿಂದ ಗೆದ್ದಿದ್ದರು ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ತುರ್ತು ಪರಿಸ್ಥಿತಿಗೂ ಮೊದಲೇ ಮತಗಳ್ಳತನ ನಡೆದಿದೆ. ರಾಯ್‍ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಇಂದಿರಾ ಗಾಂಧಿ ಮತಗಳ್ಳತನದಿಂದ ಗೆದ್ದಿದ್ದರು. ಈಗ ರಾಹುಲ್ ಅವರು ಪ್ರಚಾರಕ್ಕಾಗಿ ಮತಗಳ್ಳತನದ ಆರೋಪ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿಯವರ ಸದಸ್ಯತ್ವ ರದ್ದು ಮಾಡಿತ್ತು. ಆಗ ಅವರು ಸುಪ್ರೀಂ ಕೋರ್ಟ್‍ಗೆ ಹೋಗಿದ್ದರು. ಅಲಹಾಬಾದ್ ಕೋರ್ಟ್ ತೀರ್ಪನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ಹೇಳಿದ್ರೂ ಅಧಿಕಾರದಿಂದ ಅವರು ಕೆಳಗೆ ಇಳಿಯಲಿಲ್ಲ. ತುರ್ತು ಪರಿಸ್ಥಿತಿ ಹೇರಿ ದಬ್ಬಾಳಿಕೆ ಮಾಡಿದ್ರು. ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದು ಕಾಂಗ್ರೆಸ್, ರಾಹುಲ್ ಇದನ್ನ ಅರ್ಥ ಮಾಡಿಕೊಳ್ಳಲಿ. 50 ವರ್ಷ ಆಗಿದೆ, ದೇಶದ ಜನರಿಗೂ ಮರೆತು ಹೋಗಿದೆ ಎಂದು ಅವರು ಭಾವಿಸಿದ್ದಾರೆ.
ರಾಜ್ಯದ ಮಹದೇವಪುರ ಕ್ಷೇತ್ರದಲ್ಲಿ ಅಕ್ರಮ ನಡದಿದೆ ಅಂತಾರೆ. ಆಗ ಇಲ್ಲಿ ಯಾವ ಸರ್ಕಾರ ಇತ್ತು? ಇವರ ಅಧಿಕಾರಿಗಳೇ ಇದ್ದರಲ್ವಾ? ಸಿಎಂ ಹಾಗೂ ಇವರ ಅಡಳಿತದ ವಿರುದ್ಧವೇ ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಿದ್ದಾರಾ? ನಿಜಕ್ಕೂ ಸರ್ಕಾರ ವಿಸರ್ಜನೆ ಮಾಡಬೇಕಾದವರು ಸಿದ್ದರಾಮಯ್ಯ. ನಿಮ್ಮ ಸರ್ಕಾರದ ವಿರುದ್ಧವೇ ರಾಹುಲ್ ಕಪಾಳಕ್ಕೆ ಹೊಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ