ಬೆಂಗಳೂರು : ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು / ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿಯನ್ನು ನೀಡುವ ಸಂಬಂಧವಾಗಿ ಬಡ್ತಿಗೆ ಅರ್ಹರಿರುವ ಸರ್ಕಾರಿ ಪ್ರೌಢ / ಪದವಿ ಪೂರ್ವ ಕಾಲೇಜುಗಳಲ್ಲಿ (ಪ್ರೌಢ ಶಾಲಾ ವಿಭಾಗ) ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರುಗಳ ಜೇಷ್ಠತಾ ಪಟ್ಟಿಯನ್ನು ಉಲ್ಲೇಖ (1) ರಂತೆ ಪ್ರಕಟಿಸಿ, ಸದರಿ ಜೇಷ್ಠತಾ ಪಟ್ಟಿಯನ್ನು ಆಧರಿಸಿ ಅರ್ಹತೆ ಹೊಂದಿದ ಸಹ ಶಿಕ್ಷಕರುಗಳಿಗೆ ಸ್ಥಾನಪನ್ನ ಬಡ್ತಿಯನ್ನು ನೀಡುವ ಸಂಬಂಧವಾಗಿ ಅವಶ್ಯಕ ದಾಖಲೆಗಳನ್ನು ಸಲ್ಲಿಸಲು ಉಲ್ಲೇಖ (2) ರ ಈ ಕಚೇರಿ ಜ್ಞಾಪನದಂತೆ ತಿಳಿಸಲಾಗಿತ್ತು.
ಪ್ರಸ್ತುತ ಉಲ್ಲೇಖ (3) ರಂತೆ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರುಗಳ ಪರಿಷ್ಕೃತ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪ್ರಯುಕ್ತ, ಪರಿಷ್ಕೃತ ಜೇಷ್ಠತಾ ಪಟ್ಟಿಯನ್ನು ಆಧರಿಸಿ ಸ್ಥಾನಪನ್ನ ಬಡ್ತಿಯನ್ನು ನೀಡುವ ಸಂಬಂಧವಾಗಿ ಅವಶ್ಯಕ ದಾಖಲೆಗಳನ್ನು ಸಲ್ಲಿಸಲು ಉಲ್ಲೇಖ (2) ರ ಈ ಕಚೇರಿ ಜ್ಞಾಪನವನ್ನು ತಿದ್ದುಪಡಿಮಾಡಿ. ಬಡ್ತಿಗಾಗಿ ಅರ್ಹತೆ ಹೊಂದಬಹುದಾದ ಈ ಕೆಳಕಾಣಿಸಿದ ಶಿಕ್ಷಕರುಗಳ ಬಡ್ತಿ ಪ್ರಸ್ತಾವನೆಗಳನ್ನು ಹೊಸದಾಗಿ ಸಲ್ಲಿಸಲು ತಿಳಿಸಿದೆ.
ಈ ಪತ್ರದೊಂದಿಗೆ ಜೇಷ್ಠತಾ ಪಟ್ಟಿಯ ಎಕ್ಸೆಲ್ ಸಾಫ್ಟ್ ಪ್ರತಿಯನ್ನು ಇ-ಮೇಲ್ ಮೂಲಕ ಕಳುಹಿಸಿದೆ. ಜೇಷ್ಠತಾ ಪಟ್ಟಿಯಲ್ಲಿನ ಕಾಲಂ 3 (SENIORITY NO) ರಲ್ಲಿ ನಮೂದಿಸಿದ ಜೇಷ್ಠತಾ ಸಂಖ್ಯೆಯ ಶಿಕ್ಷಕರುಗಳ ಪ್ರಸ್ತಾವನೆಗಳನ್ನು ಸಲ್ಲಿಸುವುದು. ಬಡ್ತಿಗಾಗಿ ಅರ್ಹತೆ ಹೊಂದಬಹುದಾದ ಸಂಭವನೀಯ ಶಿಕ್ಷಕರುಗಳ ಹೆಸರುಗಳನ್ನು ಜೇಷ್ಠತಾ ಪಟ್ಟಿಯಲ್ಲಿ ‘E’ ಎಂದು ಗುರುತು ಮಾಡಲಾಗಿದೆ. ಅದನ್ನು ಪರಿಶೀಲಿಸಿಕೊಂಡು ಪ್ರಸ್ತಾವನೆಗಳನ್ನು ಸಲ್ಲಿಸಲು ಕ್ರಮವಹಿಸುವುದು. ಆದಾಗ್ಯೂ ಜೇಷ್ಠತಾ ಪಟ್ಟಿಯಲ್ಲಿ ಗುರುತು ಮಾಡದೇ ಇರುವ ಹೆಸರುಗಳನ್ನು ಹೊರತುಪಡಿಸಿ ಇನ್ನಿತರ ಶಿಕ್ಷಕರುಗಳು ಬಡ್ತಿಗಾಗಿ ಅರ್ಹತೆ ಹೊಂದಿದಲ್ಲಿ ಅಂತಹ ಶಿಕ್ಷಕರುಗಳ ಪ್ರಸ್ತಾವನೆಗಳನ್ನೂ ಸಹ ತಪ್ಪದೇ ಸಲ್ಲಿಸುವುದು.
ಮೇಲ್ಕಂಡ ಸೂಚನೆಗಳನ್ನು ಪಾಲಿಸಿ, ಪರಿಷ್ಕೃತ ಜೇಷ್ಠತಾ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಎಲ್ಲಾ ಶಿಕ್ಷಕರುಗಳ ಹೆಸರುಗಳನ್ನು ಪ್ರಕರಣವಾರು ಪರಿಶೀಲಿಸಿ, ಬಡ್ತಿಗೆ ಪರಿಗಣಿಸಬೇಕಾದ ಶಿಕ್ಷಕರುಗಳ ದಾಖಲೆಗಳು, ಹಾಗೂ ಬಡ್ತಿಗೆ ಅರ್ಹರಲ್ಲದವರ ಕುರಿತು ಸೂಕ್ತ ವಿವರಣೆ / ದಾಖಲೆಗಳನ್ನು ಜೇಷ್ಠತಾ ಕ್ರಮಾಂಕದಂತೆ ಹೊಂದಿಸಿ, ದಿನಾಂಕ 20-01-2025 ರೊಳಗಾಗಿ ಈ ಕಚೇರಿಗೆ ಸಲ್ಲಿಸುವ ಕುರಿತು ಕ್ರಮವಹಿಸಲು ತಿಳಿಸಿದೆ. ಇನ್ನುಳಿದಂತೆ ಉಲ್ಲೇಖ (2) ರ ಮಾರ್ಗಸೂಚಿಗಳು ಯಥಾವತ್ತಾಗಿ ಮುಂದುವರೆಯುತ್ತವೆ.