ಬಳ್ಳಾರಿ : ಇತ್ತೀಚಿಗೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ಹೆರಿಗೆಗೆ ಎಂದು ದಾಖಲಾಗಿದ್ದ ಗರ್ಭಿಣಿಯರಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ಒಂದು ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಸೂಚಿಸಿತ್ತು. ತನಿಖೆಯಲ್ಲಿ IV ಗ್ಲೋಕೋಸ್ ನಿಂದ ಮೃತ ಪಟ್ಟಿರುವುದಾಗಿ ತಿಳಿದುಬಂದಿತ್ತು. ಇದೀಗ ಮತ್ತೊಂದು ವಿಷಯ ಬಹಿರಂಗವಾಗಿದ್ದು, ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಏಳು ಜನ ಬಾಣಂತಿಯರಲ್ಲಿ ಮೂವರಿಗೆ ಇಲಿ ಜ್ವರ ಕಂಡುಬಂದಿತ್ತು ಎಂದು ತಿಳಿದು ಬಂದಿದೆ.
ಹೌದು ಬಳ್ಳಾರಿಯ ಸರ್ಕಾರಿ ಆಸ್ಪತ್ರೆಗೆ ಏಳು ಮಂದಿ ಗರ್ಭಿಣಿಯರು ದಾಖಲಾಗಿದ್ದರು. ಏಳೂ ಮಂದಿ ಗರ್ಭಣಿಯರಿಗೆ ನವೆಂಬರ್ 9 ರಂದು ಸಿಸೇರಿಯನ್ ಮಾಡಲಾಗಿತ್ತು. ಸಿಸೇರಿಯನ್ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ಆರೋಗ್ಯದಲ್ಲಿನ ಏರುಪೇರಿಂದ ನಾಲ್ವರು ಬಾಣಂತಿಯರು ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಇಲಿ ಜ್ವರದಿಂದ ಇಬ್ಬರು ಗುಣಮುಖರಾಗಿದ್ದು, ಒಬ್ಬರಿಗೆ ಚಿಕಿತ್ಸೆ ಮುಂದೆವರೆದಿದೆ.
ಬಾಣಂತಿಯರ ಸಾವಿನ ನಂತರ ಇದರಿಂದ ಎಚ್ಚೆತ್ತ ಸರ್ಕಾರ ನವೆಂಬರ್ 14 ರಂದು ತನಿಖಾ ತಂಡವನ್ನು ರಚನೆ ಮಾಡಿ ಬಳ್ಳಾರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿತ್ತು.ಬಳ್ಳಾರಿಗೆ ಬಂದ ತನಿಖಾ ತಂಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರ ಚಿಕಿತ್ಸಾ ವರದಿ ಪಡೆದು ಮೆಡಿಸನ್‌ಗಳ ಸ್ಯಾಂಪಲ್ ಲ್ಯಾಬ್‌ಗಳಲ್ಲಿ ಪರಿಶೀಲನೆ ಮಾಡುವ ಮೂಲಕ ಬಾಣಂತಿಯರ ಸಾವಿಗೆ ನಿಜವಾದ ಕಾರಣವನ್ನು ಪತ್ತೆ ಮಾಡಿತ್ತು. ಬಾಣಂತಿಯರ ಸರಣಿ ಸಾವಿಗೆ ಗ್ಲೊಕೋಸ್ ಸಹಿತ ಇಂಟ್ರಾವೀನಸ್ (ಐವಿ) ದ್ರಾವಣ ಕಾರಣ ಅನ್ನೊದನ್ನ ಸ್ಪಷ್ಟವಾಗಿ ವರದಿ ನೀಡಿದೆ.