ಕೊಪ್ಪಳ : ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡುವುದು ಹಾಗೂ ಗರ್ಭಿಣಿ ತಾಯಿಂದಿಯರಿಗೆ ಗುಣಮಟ್ಟದ ಆರೈಕೆ ಕುರಿತು ದೂರವಾಣಿ ಸಂದೇಶಗಳನ್ನು ರವಾನಿಸಲು ಕೇಂದ್ರ ಸಕಾರದಿಂದ ಕಿಲ್ಕಾರಿ ಸೇವೆಯನ್ನು ಪ್ರಾರಂಭಿಸಲಾಗಿರುತ್ತದೆ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಟಿ.ಲಿಂಗರಾಜು ಅವರು ತಿಳಿಸಿದ್ದಾರೆ.
ಕಿಲ್ಕಾರಿ ಎಂದರೇನು: ಕಿಲ್ಕಾರಿಯು ಭಾರತ ಸರ್ಕಾರವು ಗರ್ಭಿಣಿ, ಬಾಣಂತಿಯರಿಗೆ ತಂದಿರುವ ಉಚಿತ ಆರೋಗ್ಯ ಮಾಹಿತಿ ನೀಡುವ ಮೊಬೈಲ್ ಸೇವೆಯಾಗಿದೆ. ಇದು ಆರ್.ಸಿ.ಹೆಚ್ ತಂತ್ರಾಂಶದಲ್ಲಿ ನೊಂದಾಯಿತ ಮೊಬೈಲ್ ಫೋನ್‌ಗೆ ನೇರವಾಗಿ ಗರ್ಭಾವಸ್ಥೆ, ಬಾಣಂತಿ ಮತ್ತು ಶಿಶುವಿನ ಆರೋಗ್ಯದ ಮಾಹಿತಿಯನ್ನು ತಲುಪಿಸುತ್ತದೆ ಮತ್ತು ಈ ಉಚಿತ ಮೊಬೈಲ್ ಆರೋಗ್ಯ ಸೇವೆಯು ಗರ್ಭಿಣಿಯ ಗರ್ಭಧಾರಣೆಯ ನಾಲ್ಕನೇ ತಿಂಗಳಿನಿAದ ಮಗುವಿನ ಮೊದಲ ಜನ್ಮ ದಿನದ ವರೆಗಿನ ಅವಧಿಯನ್ನು ಒಳಗೊಂಡಿರುತ್ತದೆ.
ಕಿಲ್ಕಾರಿ ಕರೆಗಳನ್ನು ಸ್ವೀಕರಿಸುವುದು ಹೇಗೆ: ಗರ್ಭಧಾರಣೆ ಅಥವಾ ಮಗುವಿನ ಜನನವನ್ನು ಆಶಾ ಕಾರ್ಯಕರ್ತೆಯರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳ ಬಳಿ ನೊಂದಾಯಿಸಬೇಕು. ನೊಂದಾಯಿಸಲು ಮತ್ತು ಕಿಲ್ಕಾರಿ ಸೇವೆಗಳನ್ನು ಸ್ವೀಕರಿಸಲು ಬಯಸುವ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಗರ್ಭಿಣಿಯರು ನೊಂದಾಯಿಸಿದ ನಂತರ ಅವರ ಮಾಹಿತಿಯನ್ನು ಭಾರತ ಸರ್ಕಾರದ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್‌ಗೆ ನಮೂದಿಸಿದ ನಂತರ ಸಂಪೂರ್ಣವಾಗಿ ಉಚಿತವಾದ ಕಿಲ್ಕಾರಿ ಕರೆಗಳು ಬರಲು ಪ್ರಾರಂಭಿಸುತ್ತವೆ. ನೊಂದಾಯಿತ ಮೊಬೈಲ್ ಸಂಖ್ಯೆಗೆ ಡಾ. ಅನಿತಾ ಎಂಬ ಹೆಸರಿನ 0124-4451660 ಸಂಖ್ಯೆಯ ಮೊಬೈಲ್ ಕರೆಗಳು ಪ್ರತಿ ವಾರಕೊಮ್ಮೆ ಬರುತ್ತವೆ ಮತ್ತು ಈ ನಂಬರ್‌ನ್ನು ಮೊಬೈಲ್‌ನಲ್ಲಿ ಉಳಿಸಿಕೊಳ್ಳಬೇಕು ಮತ್ತು ಪ್ರತಿವಾರ ಕಿಲ್ಕಾರಿ ಕರೆಯನ್ನು ತಪ್ಪದೇ ಆಲಿಸಬೇಕು.
ಕಿಲ್ಕಾರಿ ಕರೆಗಳು ತಪ್ಪಿದರೆ ಏನು ಮಾಡಬೇಕು: ಗರ್ಭಿಣಿ ಮತ್ತು ಬಾಣಂತಿಯರು ಕಿಲ್ಕಾರಿ ಕರೆಗಳನ್ನು ತಪ್ಪಿಸಿಕೊಂಡರೆ ಅಥವಾ ಮಾಹಿತಿಯನ್ನು ಮತ್ತೊಮ್ಮೆ ಕೇಳಲು ಬಯಸಿದರೆ, ಸಂದೇಶವನ್ನು ಉಚಿತವಾಗಿ ಕೇಳಲು ನೊಂದಾಯಿದ ಮೊಬೈಲ್ ಸಂಖ್ಯೆಯಿಂದ 14423 ನಂಬರಗೆ ಕರೆ ಮಾಡಬಹುದು.
ಕಿಲ್ಕಾರಿ ಕರೆಯಲ್ಲಿ ಏನು ಕೇಳಬಹುದು: ಕಿಲ್ಕಾರಿ ಕರೆಯಲ್ಲಿ ಗರ್ಭಧಾರಣೆಯ ಅವಧಿಗೆ ಸಂಬಂಧಿಸಿದ ಆರೋಗ್ಯ ಮಾಹಿತಿಗಳು, ಮಗು ಜನಿಸಿದ ನಂತರ ಶಿಶುವಿನ ವಯಸ್ಸಿಗೆ ಸಂಭಂಧಿಸಿದ ಆರೋಗ್ಯ ಮಾಹಿತಿ ಮತ್ತು ಸಲಹೆಗಳನ್ನು ನೀಡಲಾಗುತ್ತದೆ. ಅಲ್ಲದೆ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆಯೂ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಹಾಗೂ ಮಗುವಿನ 1 ವರ್ಷದ ವರೆಗೆ ನೀಡಬೇಕಾದ ಲಸಿಕೆಗಳ ಮಾಹಿತಿಯು ಕಾಲಕಾಲಕ್ಕೆ ಕರೆಗಳ ಮುಖಾಂತರ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.