ಮಂಗಳೂರು : ರಾಜ್ಯ ಸರ್ಕಾರದಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಪ್ರಗತಿ ಪಥ ಎಂಬ ಹೊಸ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ. ಉತ್ತರ ಕರ್ನಾಟಕದಲ್ಲಿ ‘ಕಲ್ಯಾಣ ಪಥ’ ಹೆಸರಿನಲ್ಲಿ ಈ ಯೋಜನೆ ಕಾರ್ಯಗತಗೊಳ್ಳ ಲಿದ್ದು, ಮಾರ್ಚ್ 1ರಂದು ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಗ್ರಾಮ ಸಡಕ್ ಯೋಜನೆ ಮಾದರಿಯಲ್ಲಿ ರಾಜ್ಯ ಸರ್ಕಾರದಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ‘ಪ್ರಗತಿ ಪಥ’ ಹಾಗೂ ‘ಕಲ್ಯಾಣ ಪಥ’ ಎಂಬ ಹೊಸ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ. ಪ್ರಗತಿ ಪಥದಲ್ಲಿ ರಾಜ್ಯದ 7,110 ರಸ್ತೆಗಳನ್ನು 5,190 ಕೋಟಿ ವೆಚ್ಚದಲ್ಲಿ ಹಾಗೂ ಕಲ್ಯಾಣ ಪಥದಡಿ 1,150 ಕಿ.ಮೀ.ರಸ್ತೆಗಳನ್ನು 1 ಸಾವಿರ ಕೋಟಿಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.
ಪ್ರಾಕೃತಿಕ ಹಾನಿಗೆ ಸಂಬಂಧಿಸಿ 189 ಅಸೆಂಬ್ಲಿ ಕ್ಷೇತ್ರಗಳಿಗೆ 1,890 ಕೋಟಿ ಬಿಡುಗಡೆಗೊಳಿಸಲಾಗಿದ್ದು, ಪ್ರತಿ ಕ್ಷೇ ತ್ರಕ್ಕೆ 10 ಕೋಟಿ ಮಂಜೂರುಗೊಳಿಸಲಾಗಿದೆ.ಈಗಾಗಲೇ ಕಾಮಗಾರಿ ಶುರು ಮಾಡಲು ಸೂಚನೆ ನೀಡಲಾಗಿದೆ ಎಂದರು. ಇನ್ನು ಅರಿವೇ ಗುರು, ಬಸವ, ಬುದ್ದ ತತ್ವದಡಿ ಸರ್ಕಾರ ಆಡಳಿತ ನಡೆಸುತ್ತಿ ದ್ದು, ಅರಿವು ಕೇಂದ್ರಕ್ಕೆ 5,770 ಕೋಟಿ ನೀಡಲಾಗಿದೆ. 51 ಲಕ್ಷ ಬಡ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದರು.