ಬೆಂಗಳೂರು : 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಸೀಮಿತ ಸಂಪನ್ಮೂಲ, ಅಗಾಧ ರಾಜಸ್ವ ವೆಚ್ಚದ ನಡುವೆ ಸಿಎಂ ಸಿದ್ದರಾಮಯ್ಯ ಮಾ.6ಕ್ಕೆ ಬಜೆಟ್ ಮಂಡಿಸಲಿದ್ದಾರೆ. ಬಿಗುವಿನ ಹಣಕಾಸು ಸ್ಥಿತಿಯಲ್ಲಿ ಹಣಕಾಸು ಆಯೋಗದಿಂದ ಹೆಚ್ಚಿನ ತೆರಿಗೆ ಪಾಲು ತುಸು ನಿಟ್ಟುಸಿರು ಬಿಡುವಂತೆ ಮಾಡಿದರೆ, ಮಿತಿ ಮೀರಿದ ರಾಜಸ್ವ ವೆಚ್ಚಕ್ಕೆ ಕಡಿವಾಣ ಹಾಕುವ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಮುಂದಿದೆ.
ರಾಜ್ಯ ಸರ್ಕಾರದ ಹಣಕಾಸಿಗೆ ದೊಡ್ಡ ಹೊರೆಯಾಗಿರುವುದು ಪಂಚ ಗ್ಯಾರಂಟಿ. ಕಳೆದ 3 ಬಜೆಟ್ಗಳಲ್ಲಿ ಪಂಚ ಗ್ಯಾರಂಟಿಗಾಗಿ ಸುಮಾರು 1.38 ಲಕ್ಷ ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. 2023-24ನೇ ಸಾಲಿನ ಬಜೆಟ್ನಲ್ಲಿ 35,410 ಕೋಟಿ ರೂ. 2024-25ನೇ ಸಾಲಿನಲ್ಲಿ 52,009 ಕೋಟಿ ರೂ. 2025-26ನೇ ಸಾಲಿನಲ್ಲಿ 51,034 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಸೀಮಿತ ಆದಾಯ ಮೂಲಗಳಿಂದ ಪಂಚ ಗ್ಯಾರಂಟಿ ಹೊರೆ ಭರಿಸುವುದು ದೊಡ್ಡ ಕಗ್ಗಂಟಾಗಿ ಪರಿಣಮಿಸುತ್ತಿದೆ. ಹೀಗಾಗಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿನ ಅನಗತ್ಯ ವೆಚ್ಚವನ್ನು ಕಡಿತಗೊಳಿಸುವ ಸಾಧ್ಯತೆ ಬಗ್ಗೆ ಆರ್ಥಿಕ ಇಲಾಖೆ ಜೊತೆ ಸಿಎಂ ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. 16ನೇ ಹಣಕಾಸು ಆಯೋಗ ತನ್ನ ಶಿಫಾರಸಿನಲ್ಲಿ ಕರ್ನಾಟಕದ ತೆರಿಗೆ ಪಾಲಿನ ಹಂಚಿಕೆಯನ್ನು 4.13ಕ್ಕೆ ಹೆಚ್ಚಳ ಮಾಡಿದೆ.
ಅದರ ಹಿಂದಿನ ಅಂದರೆ 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶೇ 3.65ರಷ್ಟು ತೆರಿಗೆ ಪಾಲನ್ನು ಹಂಚಿಕೆ ಮಾಡಿತ್ತು. ಅದರಂತೆ ರಾಜ್ಯಕ್ಕೆ ವಾರ್ಷಿಕ 55,663 ಕೋಟಿ ರೂ. ತೆರಿಗೆ ಪಾಲು ಹಂಚಿಕೆ ಆಗುತ್ತಿತ್ತು. ಇದೀಗ 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ 63,050 ಕೋಟಿ ರೂ. ತೆರಿಗೆ ಪಾಲನ್ನು ಹಂಚಿಕೆ ಮಾಡಿದೆ. ಈ ಹೆಚ್ಚುವರಿ ತೆರಿಗೆ ಪಾಲಿನಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಲಭಿಸಲಿದೆ. ಹೀಗಾಗಿ, ಅಷ್ಟರ ಮಟ್ಟಿಗೆ ಬಿಗುವಿನ ರಾಜ್ಯದ ಹಣಕಾಸು ಸ್ಥಿತಿ ಸಡಿಲವಾಗಲಿದೆ.
ಬಿಗಿ ಹಣಕಾಸು ಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯಗೆ 2026-27ನೇ ಸಾಲಿನಲ್ಲಿ ತುಸು ನಿಟ್ಟುಸಿರು ಬಿಡುವಂತೆ ಮಾಡಿರುವುದು 16ನೇ ಹಣಕಾಸು ಆಯೋಗದಿಂದ ಹೆಚ್ಚಿನ ತೆರಿಗೆ ಪಾಲಿನ ಶಿಫಾರಸು. 16ನೇ ಹಣಕಾಸು ಆಯೋಗ ಕರ್ನಾಟಕ ರಾಜ್ಯಕ್ಕೆ 2026–27ನೇ ಸಾಲಿನಲ್ಲಿ ₹63,049 ಕೋಟಿ ತೆರಿಗೆ ಪಾಲು ಹಂಚಿಕೆ ಮಾಡಿದೆ. ಆ ಮೂಲಕ 7,387 ಕೋಟಿ ರೂ.ರಷ್ಟು ಹೆಚ್ಚುವರಿ ಅನುದಾನ ಲಭಿಸಲಿದೆ. ಇದು ಹಣಕಾಸು ಸಂಕಷ್ಟದ ಸ್ಥಿತಿಯಲ್ಲಿ ರಾಜ್ಯಕ್ಕೆ ತುಸು ಉಸಿರು ಬಿಡುವಂತೆ ಮಾಡಿದೆ.
ಸಿಎಂ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್ಗೆ ಕಳೆದ ಒಂದು ತಿಂಗಳಿಂದ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಿ, ಇದೀಗ ಅಂತಿಮ ರೂಪ ನೀಡುತ್ತಿದ್ದಾರೆ. ಮಾ. 6ಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ 17ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಬಿಗಿ ಹಣಕಾಸು ಸ್ಥಿತಿ, ಆದಾಯ ಸಂಗ್ರಹದ ಕೊರತೆ, ಹೆಚ್ಚುವರಿ ಹೊರೆಯ ಮಧ್ಯೆ ಈ ಬಾರಿ ಬಜೆಟ್ ಮಂಡನೆ ಸಿಎಂ ಸಿದ್ದರಾಮಯ್ಯಗೆ ಕಬ್ಬಿಣದ ಕಡಲೆಯೇ ಸರಿ. ಬಂಡವಾಳ ವೆಚ್ಚ ಹಾಗೂ ಅಗಾಧ ರಾಜಸ್ವ ವೆಚ್ಚದ ಮಧ್ಯೆ ಸಮತೋಲನ ಕಾಪಾಡಿ ಹಣಕಾಸು ನಿರ್ವಹಣೆ ಮಾಡುವ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಮೇಲಿದೆ.








